– ಕಾರ್ಮಿಕರಿದ್ದ 12 ಬಸ್ ತಡೆದು ಸ್ಥಳೀಯರ ಪ್ರತಿಭಟನೆ
ಬಳ್ಳಾರಿ: ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಮುಂದಿನ 21 ದಿನಗಳ ಕಾಲ ಭಾರತ ಲಾಕ್‍ಡೌನ್ ಆಗಲಿದೆ ಎಂದು ಹೇಳಿದ್ದರು. ಆದರೆ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.
ಬಳ್ಳಾರಿಯ ಜಿಂದಾಲ್ ಕಂಪನಿ ಕೂಡ ನಡೆಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿರುವ ಕಾರ್ಮಿಕರನ್ನು ಬಸ್ಸಿನಲ್ಲಿ ಕರೆದುಕೊಂಡು ಬರಲಾಗುತ್ತಿದೆ. ಈ ಮೂಲಕ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ಇದರಿಂದಾಗಿ ಸ್ಥಳೀಯರು ಜಿಂದಾಲ್ ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಂದ ಕೆಲಸ ನಡೆಯುತ್ತಿದೆ ಎಂಬ ಮಾಹಿತಿ ಸ್ಥಳೀಯರಿಗೆ ಸಿಕ್ಕಿತ್ತು. ಹೀಗಾಗಿ ಇಂದು ಬೆಳಗಿನ ಜಾವ ಕಾರ್ಮಿಕರನ್ನು ಕಂಪನಿಗೆ ಕರೆದುಕೊಂಡು ಹೋಗುತ್ತಿದ್ದ ಸುಮಾರು 12 ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಆದರೆ ಇದಕ್ಕೆಲ್ಲ ಕ್ಯಾರೆ ಎನ್ನದೇ ಕಾರ್ಮಿಕರನ್ನು ಕಂಪನಿಗೆ ಕರೆದೊಯ್ಯಲಾಯಿತು.
Advertisement
ಜಿಂದಾಲ್ ಕಂಪನಿಗೆ ಅಮೆರಿಕ, ಚೀನಾ ಸೇರಿದಂತೆ ವಿವಿಧ ಭಾಗದಿಂದ ಎಂಜಿನೀಯರ್ ಗಳು ಬರುತ್ತಾರೆ. ಅಷ್ಟೇ ಅಲ್ಲದೆ ಸ್ಥಳೀಯರು ಕಂಪನಿಯಲ್ಲಿ ಕೆಲಸ ಮಾಡಿ ತಮ್ಮ ಗ್ರಾಮಗಳಿಗೆ ಮರಳುತ್ತಾರೆ. ಈ ಪೈಕಿ ಯಾರಿಗಾದರು ಕೊರೊನಾ ಸೋಂಕು ತಗುಲಿದರೆ ಜಿಲ್ಲೆಯ ಪರಿಸ್ಥಿತಿ ತುಂಬಾ ಗಂಭೀರವಾಗಿರುತ್ತದೆ. ಇದರಿಂದಾಗಿ ಏಪ್ರಿಲ್ 14ರವರೆಗೂ ಕಂಪನಿಯನ್ನು ಮುಚ್ಚಿಸಬೇಕು ಎಂದು ಸ್ಥಳೀಯರ ಒತ್ತಾಯಿಸಿದ್ದಾರೆ.