– ಹಂಪಿ ಉತ್ಸವ ಆಚರಿಸದಿದ್ರೆ ಹೋರಾಟ
ಬಳ್ಳಾರಿ: ವಿಜಯನಗರವನ್ನು ಜಿಲ್ಲೆ ಎಂದು ಘೋಷಣೆಗೆ ಸರ್ಕಾರದಿಂದ ಪ್ರಕ್ರಿಯೆ ಆರಂಭವಾಗಿದ್ದು, ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರು ಸರ್ಕಾರದ ವಿರುದ್ಧ ಮತ್ತೊಮ್ಮೆ ಸಿಡಿದೆದ್ದಿದ್ದಾರೆ.
ಬಳ್ಳಾರಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಆನಂದ್ ಸಿಂಗ್ ರಾಜೀನಾಮೆಗೆ ನೀಡಿದ್ದಕ್ಕೆ ಸರ್ಕಾರ ಹೊಸ ಜಿಲ್ಲೆ ಘೋಷಣೆ ಮಾಡಬಾರದು. ಜಿಲ್ಲೆಯಲ್ಲಿ ನಾಲ್ಕು ಜನ ಬಿಜೆಪಿ ಶಾಸಕರಿದ್ದೇವೆ. ನಮ್ಮನ್ನು ಕರೆದು ಸಿಎಂ ಬಿಎಸ್‍ವೈ ಚರ್ಚೆ ನಡೆಸಬೇಕು. ಈಗಾಗಲೇ ಸಿಎಂಗೆ ಸಲಹೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ವಿಜಯನಗರ ಜಿಲ್ಲೆ ಘೋಷಣೆ ಮಾಡಬಾರದು. ಅಖಂಡ ಜಿಲ್ಲೆಯಾಗಿ ಇರಬೇಕು ಎಂದು ನಾವು ಒತ್ತಾಯ ಮಾಡಿದ್ದೇವೆ ಎಂದರು.
ನವೆಂಬರ್ ತಿಂಗಳಲ್ಲಿ ಹಂಪಿ ಉತ್ಸವ ಆಚರಣೆ ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ಲಕ್ಷ್ಮಣ ಸವದಿ ಜೊತೆ ಈ ಸಂಬಂಧ ಚರ್ಚೆ ನಡೆಸುತ್ತೇವೆ. ಈ ಹಿಂದೆ ಹಂಪಿ ಉತ್ಸವ ಆಚರಣೆಗಾಗಿ ಪ್ರತಿಭಟನೆ ನಡೆಸಿದ್ದೆವು. ಈಗಲೂ ಹಂಪಿ ಉತ್ಸವ ಆಚರಣೆ ಮಾಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಕೈ ಮಾಜಿ ಶಾಸಕ ಅನಿಲ್ ಲಾಡ್ ಬಿಜೆಪಿ ಸೇರ್ಪಡೆ ವಿಚಾರ ಸಂಬಂಧ ಪ್ರತಿಕ್ರಿಯಿಸಲು ನಿರಾಕರಿಸಿದರು.
ಸೋಮಶೇಖರ್ ರೆಡ್ಡಿ ಅವರು ಈ ಹಿಂದೆಯೂ ವಿಜಯನಗರ ಜಿಲ್ಲೆಯನ್ನಾಗಿ ಘೋಷಣೆ ಮಾಡಬಾರದೆಂದು ಹೇಳಿದ್ದರು. ವಿಜಯನಗರ ಜಿಲ್ಲೆ ರಚನೆ ಮಾಡುವ ವಿಚಾರ ನಮಗೆ ಒಪ್ಪಿಗೆ ಇಲ್ಲ. ಬಳ್ಳಾರಿ ಜಿಲ್ಲೆಯ ಹೆಸರನ್ನೇ ವಿಜಯನಗರ ಎಂದು ಬದಲಿಸಿವುದು ಭಾವನಾತ್ಮಕ ವಿಚಾರ, ಮುಂದೆ ಕೂಡ ಅಖಂಡ ಜಿಲ್ಲೆ ಒಗ್ಗಟ್ಟಾಗಿಯೇ ಇರಬೇಕು. ಜಿಲ್ಲೆಯನ್ನು ವಿಭಜಿಸುವ ಪ್ರಕ್ರಿಯೆಗೆ ಸ್ವಾಮೀಜಿಗಳು ಬೆಂಬಲ ನೀಡಿರುವುದು ಬೇಸರ ತರಿಸಿದೆ ಎಂದು ಹೇಳಿದ್ದರು.