ಲಾಕ್‍ಡೌನ್ ಉಲ್ಲಂಘಿಸಿದವರಿಗೆ ಬಸ್ಕಿ ಹೊಡೆಸಿದ್ದು ಪೊಲೀಸರಲ್ಲ, ನರ್ಸ್

Public TV
1 Min Read
DVG Nurse

ದಾವಣಗೆರೆ: ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಹಲವೆಡೆ ಪೊಲೀಸರು ಲಾಕ್‍ಡೌನ್ ಉಲ್ಲಂಘಿಸಿದ ಪುಂಡರಿಗೆ ಬಸ್ಕಿ ಹೊಡೆಸಿರುವುದು ಹಳೆಯ ಸುದ್ದಿ. ಆದರೆ ಇಲ್ಲೊಬ್ಬರು ನರ್ಸ್, ಮಾಸ್ಕ್ ಹಾಕದೇ ಮನೆಯಿಂದ ಹೊರಬಂದವರಿಗೆ ಬಸ್ಕಿ ಹೊಡೆಸಿದ್ದಾರೆ.

ಇಂಥದ್ದೊಂದು ಪ್ರಸಂಗ ನಡೆದಿರುವುದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ. ಮನೆಯಿಂದ ಯಾರೂ ಹೊರಬರಬಾರದು ಎಂದು ಮನವಿ ಮಾಡಿದ್ದರೂ ಯುವಕರು ಮಸ್ತಿಗಾಗಿ ಮನೆಯಿಂದ ಹೊರಬಂದಿದ್ದರು. ಈ ವೇಳೆ ನರ್ಸ್ ಸೀಮಾ ಅವರು ಯುವಕರಿಗೆ ಬೆತ್ತದ ರುಚಿ ತೋರಿಸುವ ಜೊತೆಗೆ ಬಸ್ಕಿ ಹೊಡೆಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.

DVG Nurse A

ಮನೆಯಿಂದ ತೆಲಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದರು. ಈ ವೇಳೆ ಬೇಕಾಬಿಟ್ಟಿಯಾಗಿ ಯುವಕರು, ಸಾರ್ವಜನಿಕರು ತಿರುಗಾಡುತ್ತಿದ್ದರು. ಕೆಲವರು ಮಾಸ್ಕ್ ಕೂಡ ಧರಿಸಿರಲಿಲ್ಲ. ಈ ವೇಳೆ ಸೋಂಕು ಹರಡುವ ಭೀತಿ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೂ ಈ ರೀತಿಯಾಗಿ ಓಡಾಡುವುದಕ್ಕೆ ಬಸ್ಕಿ ಹೊಡೆಸುವ ಮೂಲಕ ಶಿಕ್ಷೆ ನೀಡಿದ್ದು, ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ ಹತ್ತು ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸೀಮಾ ಅವರಿಗೆ ಗ್ರಾಮದಲ್ಲಿ ಒಳ್ಳೆಯ ಹೆಸರಿದೆ. ಯಾರೇ ಆರೋಗ್ಯ ಸಮಸ್ಯೆ ಎಂದು ಆಸ್ಪತ್ರೆಗೆ ಹೋದರೆ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹಾಗಾಗಿ ಅವರು ಕೊಟ್ಟ ಶಿಕ್ಷೆ ಒಪ್ಪಿಕೊಂಡು ಅವರ ಮಾತು ಪಾಲಿಸುತ್ತೇವೆ. ಅವರು ನಮ್ಮ ಒಳ್ಳೆಯದಕ್ಕೆ ಹೇಳುವುದು ಅಲ್ವಾ ಎಂದು ಸ್ಥಳೀಯರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *