ಬಳ್ಳಾರಿ: ಮೊನ್ನೆಯಷ್ಟೇ ಕೊಡಗಿನ ಬಾಲಕನೊಬ್ಬ ತನ್ನೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿ ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದನು. ಇದೀಗ ಅದೇ ರೀತಿಯಾಗಿ ಮತ್ತೊಬ್ಬ ಬಾಲಕಿ ತನ್ನೂರಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪತ್ರಕರ್ತೆಯ ರೀತಿಯಲ್ಲೇ ವರದಿ ಮಾಡಿದ್ದಾಳೆ.
ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತಳಕಲ್ ಗ್ರಾಮದ 7ನೇ ತರಗತಿಯಲ್ಲಿ ಓದುತ್ತಿರುವ ರೋಜಾ ಎಂಬ ಬಾಲಕಿ ತನ್ನೂರಿನ ಕೆರೆಯ ಸಮಸ್ಯೆ ಬಗ್ಗೆ ವಿವರಿಸಿದ್ದಾಳೆ. ಈ ಭಾಗದ ರೈತರ ಪ್ರಮುಖ ಜೀವನಾಧಾರವಾದ ಕೆರೆಗೆ ನೀರು ತುಂಬಿಸುವ ಯೋಜನೆಗೆ ಪೂಜೆ ಮಾಡಿ ಎರಡು ವರ್ಷವಾಗಿದೆ. ಆದರೆ ಇದುವರೆಗೂ ಕೆರೆಗೆ ಹನಿ ನೀರುಬ ಸಹ ಬಂದಿಲ್ಲ ಎಂದು ಹೇಳಿದ್ದಾಳೆ.

ಶಾಸಕ ಪರಮೇಶ್ವರ ನಾಯ್ಕ್ ಭರವಸೆ ನೀಡಿ ಪೂಜೆ ಮಾಡಿ ಹೋದ ಕೆರೆಗೆ ಇನ್ನೂ ನೀರು ಬಂದಿಲ್ಲ. ಅಲ್ಲದೇ ಶಿಂಗಟಾಲೂರ ಬ್ಯಾರೇಜ್ ನಿಂದ ನಿತ್ಯ 40 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದುಹೋಗುತ್ತಿದೆ. ಆ ನೀರನ್ನ ಕೆರೆ ತುಂಬಿಸುವ ಯೋಜನೆಗೆ ಬಳಸಬೇಕಾದ ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯತನ ಇದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಶಿಂಗಟಲೂರ ಬ್ಯಾರೇಜ್ ಬಳಿಯಿಂದ ಪೈಪ್ ಲೈನ್ ಕಾರ್ಯ ಆಳವಡಿಕೆ ಕಾರ್ಯ ನಡೆದಿದ್ದರು ಕೂಡ ಕೆರೆಗೆ ನೀರು ಹರಿದಿಲ್ಲ. ಅಲ್ಲದೇ ಕೆರೆಯ ನಿರ್ವಹಣೆ ಇಲ್ಲದೇ ಮುಳ್ಳುಗಂಟೆಗಳೇ ಹರಡಿಕೊಂಡಿದೆ ಎಂದು ಮಾಹಿತಿ ನೀಡಿದ್ದಾಳೆ.
 


 
		 
		 
		 
		
 
		 
		 
		 
		