ಬಳ್ಳಾರಿ: ಕೂಡ್ಲಿಗಿ ಬಹಿರಂಗ ಸಭೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕರೆಸುವ ಮೂಲಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಟಕ್ಕರ್ ಕೊಟ್ಟರಾ ಎಂಬ ಪ್ರಶ್ನೆಯೊಂದು ಉಪ ಕದನದಲ್ಲಿ ಸುಳಿದಾಡುತ್ತಿದೆ.
ಉಪಚುನಾವಣೆ ಪ್ರಚಾರಕ್ಕಾಗಿ ಬಳ್ಳಾರಿಗೆ ಡಿ.ಕೆ.ಶಿವಕುಮಾರ್ ಮಂಗಳವಾರ ಆಗಮಿಸುತ್ತಿದ್ದಂತೆ ಸಚಿವ ರಮೇಶ್ ಜಾರಕಿಹೊಳಿ ಕೂಡ್ಲಿಗೆ ಬಹಿರಂಗ ಸಭೆಗೆ ಗೈರು ಆಗಲು ಮುಂದಾಗಿದ್ದರು. ಈ ಬೆಳವಣಿಗೆ ಅರಿತು ಡಿ.ಕೆ.ಶಿವಕುಮಾರ್ ಅವರು ದಿನೇಶ್ ಗುಂಡೂರಾವ್ ಅವರನ್ನೇ ಕ್ಷೇತ್ರಕ್ಕೆ ಕರೆಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ರಮೇಶ್ ಜಾರಕಿಹೊಳಿ ಅವರ ದಿಢೀರ್ ಗೈರಿನ ಕುರಿತು ಮಾಧ್ಯಮಗಳು ಪ್ರಶ್ನಿದ್ದಕ್ಕೆ, ಉಸ್ತುವಾರಿಯನ್ನು ಹಂಚಿಕೆ ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್. ನೀವು ಅವರನ್ನೇ ಪ್ರಶ್ನೇ ಮಾಡಿ ಎಂದು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಸಚಿವರ ಕಿತ್ತಾಟವನ್ನು ಹತ್ತಿಕ್ಕಲು ದಿನೇಶ್ ಗುಂಡೂರಾವ್ ಕ್ಷೇತ್ರಕ್ಕೆ ಆಗಮಿಸಿದ್ದಾರಾ ಎನ್ನುವ ಚರ್ಚೆ ಪಕ್ಷದ ವಲಯದಲ್ಲಿ ಹರಿದಾಡುತ್ತಿದೆ.
ಕೂಡ್ಲಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ಉಸ್ತುವಾರಿಯನ್ನು ರಮೇಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಮುಖಂಡರು ವಹಿಸಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಪ್ರಚಾರದ ಸಿದ್ಧತೆ ಮಾಡಿಕೊಂಡಿದ್ದ ಸಚಿವರು ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ನಾಯಕರ ಸಭೆ ನಡೆಸಿದ್ದರು. ಕೂಡ್ಲಗಿ ಸಂತೆ ಮೈದಾನದಲ್ಲಿ ಇಂದು ಬಹಿರಂಗೆ ಸಭೆ ಆಯೋಜಿಸಲಾಗಿತ್ತು. ಆದರೆ ಕ್ಷೇತ್ರಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸಿದರು ಅಂತಾ ರಮೇಶ್ ಜಾರಕಿಹೊಳಿ ಅವರು ಸಭೆಗೆ ಗೈರು ಆಗಿದ್ದಾರಂತೆ ಎನ್ನಲಾಗುತ್ತಿದೆ.
ಬಹಿರಂಗ ಸಭೆಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ಮುಂದಾದ ಡಿ.ಕೆ.ಶಿವಕುಮಾರ್ ಅವರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಿ ರಮೇಶ್ ಜಾರಕಿಹೊಳಿ ಅವರಿಗೆ ಟಕ್ಕರ್ ನೀಡಿದ್ದಾರಂತೆ. ಇತ್ತ ಕೂಡ್ಲಗಿ ಮುಖಂಡರಿಗೆ ಇಂದು ಬೆಳಗ್ಗೆ ಕರೆ ಮಾಡಿದ ಸಚಿವರು, ಎರಡು ದಿನ ಬಿಟ್ಟು ಕ್ಷೇತ್ರಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv