ಬಳ್ಳಾರಿ: ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದ ತಬ್ಲಿಘಿ ಜಮಾತ್‍ಗೆ ಹೋಗಿ ಬಂದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳದ ಹಿನ್ನೆಲೆ ಜಿಲ್ಲಾಡಳಿತ ಅವರನ್ನು ಬಿಡುಗಡೆ ಮಾಡಿದೆ.
ಬಳ್ಳಾರಿ ಜಿಲ್ಲೆಯ ನಾನಾ ಪ್ರದೇಶದಿಂದ ದೆಹಲಿಯ ತಬ್ಲಿಘಿ ಜಮಾತ್‍ಗೆ 92 ಮಂದಿ ಹೋಗಿ ಬಂದಿದ್ದರು. ಹೀಗಾಗಿ ಅವರನ್ನು ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಯದಲ್ಲಿ 79 ಜನರನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ಇನ್ನು ಉಳಿದ 12 ಜನರು ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದರು. ಹೀಗಾಗಿ ಅವರನ್ನು ಆಯಾ ಪ್ರದೇಶದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇನ್ನು ಜಮಾತ್‍ಗೆ ಹೋಗಿ ಬಂದವರು ಸೇರಿದಂತೆ ಕ್ವಾರಂಟೈನಲ್ಲಿದ್ದ ಜಿಲ್ಲೆಯ ಒಟ್ಟು 238 ಜನರನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.
ಇವರೆಲ್ಲಾ ಕೊರೊನಾ ಸೋಂಕು ಹೊಂದಿದವರ ಜೊತೆಯಲ್ಲಿ ಸಂಪರ್ಕ ಹೊಂದಿದ್ದರು. ಆದ್ರೆ ಇವರಲ್ಲಿ ಯಾರಿಗೂ ಸೋಂಕಿನ ಗುಣಲಕ್ಷಣಗಳು ಕಾಣದ ಹಿನ್ನೆಲೆ ಜಿಲ್ಲಾಡಳಿತ ಕ್ವಾರಂಟೈನಿಂದ ಇವರನ್ನು ಬಿಡುಗಡೆ ಮಾಡಿದೆ. ಜಿಲ್ಲಾಡಳಿತ ಇವರಿಗೆ ಕಟ್ಟುನಿಟ್ಟಿನ ಆದೇಶ ಮಾಡಿದ್ದು, ಬಿಡುಗಡೆ ಆದ ಇವರೆಲ್ಲಾ ಹೋಮ್ ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಈವರೆಗೂ ಒಟ್ಟು 13 ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿವೆ. ಅಲ್ಲದೇ ತಬ್ಲಿಘಿ ಜಮಾತ್‍ಗೆ ಹೋಗಿ ಬಂದ ಒಬ್ಬರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ.