Connect with us

Bellary

ಫೇಲಾದ ಗಣಿತದಲ್ಲಿಯೇ ಐಎಎಸ್ ಮಾಡಿದೆ- ವಿದ್ಯಾರ್ಥಿಗಳಿಗೆ ಸಿಇಓ ಪಾಠ

Published

on

– ಎಸ್‍ಎಲ್‍ಎಲ್‍ಸಿ ಫಲಿತಾಂಶದಲ್ಲಿ ಬಳ್ಳಾರಿ ಅಗ್ರಸ್ಥಾನಕ್ಕೇರಲು ಶ್ರಮಿಸಿ

ಬಳ್ಳಾರಿ: ಜಿಲ್ಲೆಯಲ್ಲಿ ಈ ಬಾರಿ ಎಸ್‍ಎಲ್‍ಎಲ್‍ಸಿ ಫಲಿತಾಂಶ ವೃದ್ಧಿಸುವ ನಿಟ್ಟಿನಲ್ಲಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಬಾರಿ ಜಿಲ್ಲೆ ಅಗ್ರಸ್ಥಾನಕ್ಕೇರಿಸಲು ಎಲ್ಲ ಶಿಕ್ಷಕ ಸಮುದಾಯ ಶ್ರಮಿಸಬೇಕು. ಎಲ್ಲ ಮಕ್ಕಳನ್ನು ಪಾಸ್ ಮಾಡುವ ಸಾಮರ್ಥ್ಯ ಹಾಗೂ ಅಸಾಧ್ಯವನ್ನು ಸಾಧ್ಯವಾಗಿಸುವ ಸಾಮರ್ಥ್ಯ ತಮ್ಮಲ್ಲಿದೆ ಎಂದು ಜಿ.ಪಂ ಸಿಇಒ ಕೆ.ನಿತೀಶ್ ಹೇಳಿದ್ದಾರೆ.

ಜಿಲ್ಲಾಡಳಿತ, ಜಿ.ಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಎಸ್‍ಎಲ್‍ಎಲ್‍ಸಿ ಫಲಿತಾಂಶ ಉತ್ತಮಗೊಳಿಸುವ ಕುರಿತು ಜಿಲ್ಲೆಯ ಎಲ್ಲಾ ಪ್ರೌಢಶಾಲೆ ಮುಖ್ಯಗುರುಗಳು, ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಬದುಕು ರೂಪಿಸುವ ನಿಟ್ಟಿನಲ್ಲಿ ಎಸ್‍ಎಲ್‍ಎಲ್‍ಸಿ ಮುಖ್ಯ ಘಟ್ಟ. ತಾವು ವಿದ್ಯಾರ್ಥಿಗಳನ್ನು ಯಾವ ರೀತಿ ಪರಿಣಾಮಕಾರಿಯಾದ ಬೋಧನೆಯ ಮೂಲಕ ಅಣಿಗೊಳಿಸುತ್ತೀರೋ ಅವರು ಉತ್ತಮ ಫಲಿತಾಂಶ ಪಡೆಯಲು ಸಜ್ಜಾಗುತ್ತಾರೆ ಎಂದರು.

ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಅವರನ್ನು ಪರಿಗಣಿಸಿ ಮತ್ತು ಬೋಧಿಸಿ. ಶಿಕ್ಷಕರು ಸರಿಯಾಗಿ ಪಾಠ ಮಾಡಿದರೇ ವಿದ್ಯಾರ್ಥಿಗಳು ಭವಿಷ್ಯ ಕಟ್ಟಿಕೊಂಡ ಬಳಿಕ ನಿಮ್ಮನ್ನು ಸ್ಮರಿಸಲಿದ್ದಾರೆ. ಶಿಕ್ಷಕರಿಗೆ ಪ್ರತಿ ವರ್ಷ 10ನೇ ಕ್ಲಾಸ್ ಬರುತ್ತೆ. ಆದರೆ ವಿದ್ಯಾರ್ಥಿಗಳಿಗೆ ಒಂದೆ ಸಾರಿ ಬರುವುದು. ಇದೊಂದು ನಿಮಗೆ ಸದಾವಕಾಶ, ಅದನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು.

ತಾವು ಖುಷಿಯಿಂದ ಮಕ್ಕಳಿಗೆ ಪಾಠ ಹೇಳಿಕೊಟ್ಟರೇ ಅದು ಅವರ ತಲೆಗೆ ಹೋಗುತ್ತದೆ. ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ತಮಗೆ ಯಾವ ಸಹಾಯ-ಸಹಕಾರ ಬೇಕು ಅದನ್ನು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ಚಿತ್ರದುರ್ಗದಲ್ಲಿ ನವೋದಯ ಶಾಲೆಯಲ್ಲಿ ನಾನು 8ನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಗಣಿತ ವಿಷಯದಲ್ಲಿ ಫೇಲಾಗಿದ್ದೆ. ಆದರೆ ನಂತರ ಅದೇ ಗಣಿತ ಶಿಕ್ಷಕರು ಅತ್ಯಂತ ಇಷ್ಟವಾಗಿ ಅವರ ಪಾಠವನ್ನು ಪ್ರೀತಿಯಿಂದ ಕಲಿತು ಎಸ್‍ಎಲ್‍ಎಲ್‍ಸಿಯಲ್ಲಿ 99 ಹಾಗೂ ಪಿಯುಸಿಯಲ್ಲಿ 100ಕ್ಕೆ 100 ಅಂಕಗಳನ್ನು ಪಡೆದುಕೊಂಡೆ ಎಂದು ಕೆ.ನಿತೀಶ್ ಹೇಳಿದ್ದಾರೆ.

ನಂತರದ ದಿನಗಳಲ್ಲಿ ಗಣಿತ ಇಷ್ಟದ ವಿಷಯವಾಯ್ತು. ಇಂಜನಿಯರಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದೆ. ಐಎಎಸ್ ಪರೀಕ್ಷೆಯನ್ನು ಗಣಿತದಲ್ಲಿಯೇ ಎದುರಿಸಿ ಇಡೀ ದೇಶಕ್ಕೆ 8ನೇ ರ‌್ಯಾಂಕ್ ಗಳಿಸಿದೆ. ಇದಕ್ಕೆ ಕಾರಣ ನನಗೆ ಕಲಿಸಿದ ಗಣಿತ ಶಿಕ್ಷಕರು ಎಂದು ಅವರು ಸ್ಮರಿಸಿದರು. ತಾವು ತಮ್ಮ ಮಕ್ಕಳನ್ನು ಅತ್ಯಂತ ಇಷ್ಟದಿಂದ ಕಲಿಸಿ. ಅವರು ಉನ್ನತ ಸ್ಥಾನಕ್ಕೇರಿದಾಗ ತಮ್ಮನ್ನು ಸದಾ ಸ್ಮರಿಸುತ್ತಾರೆ. ಅಂದು ಫೇಲಾಗಿದ್ದ ನನ್ನನ್ನೇ ಐಎಎಸ್ ಅಧಿಕಾರಿಯನ್ನಾಗಿ ಮಾಡಿದ ಕೀರ್ತಿ ಶಿಕ್ಷಕ ಸಮೂಹಕ್ಕೆ ಸೇರುತ್ತದೆ ಎಂದು ತಮ್ಮ ಬಾಲ್ಯವನ್ನು ನೆನೆದರು.

Click to comment

Leave a Reply

Your email address will not be published. Required fields are marked *