– ತನಿಖೆಯ ಬಗ್ಗೆ ಅನುಮಾನ, ಸಿಬಿಐಗೆ ನೀಡಿ
– ಆರ್‌ಸಿಬಿ ಕಾಲ್ತುಳಿತ ಕೇಸ್‌ನಲ್ಲಿ ಹಲವರ ಅಮಾನತು, ಇಲ್ಲಿ ಎಸ್‌ಪಿ ಯಾಕೆ?
ಬೆಂಗಳೂರು: ಬಳ್ಳಾರಿ ಗಲಾಟೆ (Ballari Clash) ಪ್ರಕರಣದಲ್ಲಿ ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತನ ಶವ ಪರೀಕ್ಷೆಯನ್ನು ಸರ್ಕಾರ ಎರಡು ಬಾರಿ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹಲವು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಳ್ಳಾರಿಯ ಗಲಾಟೆ ಪೂರ್ವ ನಿಯೋಜಿತವಾಗಿದ್ದು ಮೃತನ ಶವ ಪರೀಕ್ಷೆಯನ್ನು ಎರಡು ಬಾರಿ ಮಾಡಲಾಗಿದೆ. ಎರಡನೇ ಬಾರಿ ಯಾರ ಒತ್ತಡಕ್ಕೆ ಶವ ಪರೀಕ್ಷೆ ಮಾಡಿದ್ದಾರೆ? ಶವ ಪರೀಕ್ಷೆ ಮಾಡಲು ಅನುಮತಿ ಕೊಟ್ಟವರು ಯಾರು? ಯಾರ ಒತ್ತಡಕ್ಕೆ ಎರಡನೇ ಬಾರಿ ಶವ ಪರೀಕ್ಷೆ ಮಾಡಿದ್ದಾರೆ? ಈ ಪ್ರಕರಣದ ತನಿಖೆಯ ಬಗ್ಗೆ ಅನುಮಾನವಿದ್ದು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದರು.
ಜನಾರ್ದನ ರೆಡ್ಡಿ ಮೇಲೆ ಆರೋಪ ಹೊರಿಸಲೆಂದೇ ಎರಡನೇ ಬಾರಿ ಶವ ಪರೀಕ್ಷೆ ಮಾಡಲಾಗಿದೆ ಎಂದು ಆರೋಪಿಸಿದ ಹೆಚ್‌ಡಿಕೆ, ಸಿದ್ದರಾಮಯ್ಯ ಅವರು ದೇವರಾಜ್ ಅರಸ್ ದಾಖಲೆಯ ಮುರಿದು ಸಾಧನೆ ಮಾಡಲು ಹೊರಟಿದ್ದಾರೆ. ಅವರ ಸಾಧನೆ ಮಣ್ಣು ಹೊಯ್ಯಿಕೊಳ್ಳಬೇಕು. ಸಿದ್ದರಾಮಯ್ಯ ಅವಧಿಯಲ್ಲಿ ಜನರ ರಕ್ಷಣೆ ಆಗಿಲ್ಲ. ಬಳ್ಳಾರಿಯಲ್ಲಿ ಗುಂಡಿನ ದಾಳಿ ನಡೆದಿದ್ದರೂ ಈ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ರಾಜ್ಯದಲ್ಲಿ ಸರ್ಕಾರ ಬದುಕಿದೆಯಾ? ಸತ್ತು ಹೋಗಿದೆಯಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಳ್ಳಾರಿ ಬುಲೆಟ್ ರಹಸ್ಯ ಬಯಲು – ಬಿಜೆಪಿಯ 13 ಜನ ಸೇರಿ 26 ಮಂದಿ ಅರೆಸ್ಟ್
ಸತೀಶ್‌ರೆಡ್ಡಿ ಗನ್‌ನಿಂದ ಫೈಯರ್ ಆಗಿದೆ ಅಂತ ಸಿಎಂ ಅವರೇ ಹೇಳಿದ್ದಾರೆ. ಗೃಹ ಸಚಿವರು ಆತನನ್ನು ಬಂಧನ ಮಾಡದೇ ಸತೀಶ್ ರೆಡ್ಡಿಗೆ ಸರ್ಕಾರವೇ ಚಿಕಿತ್ಸೆ ಕೊಡುತ್ತಿದೆ. ಡಿಸಿಎಂ ಡಿಕೆಶಿವಕುಮಾರ್ ಭರತ್ ರೆಡ್ಡಿ ಬೆನ್ನಿಗೆ ನಿಲ್ಲುತ್ತೇವೆ ಎಂದು ಹೇಳಿರುವಾಗ ಯಾವ ರೀತಿ ತನಿಖೆ ಮಾಡ್ತಾರೆ ಎಂದು ಪ್ರಶ್ನಿಸಿದರು.
ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದ ಮೇಲೆ ಗಲಾಟೆ ಆಗಿದೆ ಅಂತ ಡಿಸಿಎಂ ಹೇಳ್ತಾರೆ. ಅದಕ್ಕೆ ಪರಮೇಶ್ವರ್ ಹಿಮ್ಮೇಳ ಹಾಕ್ತಾರೆ. ಒಂದೂವರೆ ವರ್ಷದಿಂದ ರೆಡ್ಡಿ ಸುಪ್ರೀಂಕೋರ್ಟ್ ಅನುಮತಿ ಪಡೆದು ಬಳ್ಳಾರಿಗೆ ಬರುತ್ತಿದ್ದಾರೆ. ಎಷ್ಟು ಗಲಾಟೆ ಆಗಿದೆ ಅಂಕಿಅಂಶಗಳನ್ನ ಕೊಡಿ ಅಂತ ಆಗ್ರಹ ಮಾಡಿದ್ರು.
ಜನಾರ್ದನ ರೆಡ್ಡಿ ಅವರು ಭದ್ರತೆ ಕೊಡಿ ಎಂದಿದ್ದಕ್ಕೆ ಅಮೆರಿಕ, ಇರಾನ್‌ನಿಂದ ಭದ್ರತೆ ತನ್ನಿ ಅಂತ ಡಿಕೆಶಿವಕುಮಾರ್ ಹೇಳ್ತಾರೆ. ನಿಮ್ಮ ಯೋಗ್ಯತೆಗೆ ಭದ್ರತೆ ಕೊಡಲು ಆಗದೇ ಹೋದ್ರೆ ಟ್ರಂಪ್ ಗೆ ಸರ್ಕಾರ ಬಿಟ್ಟು ಕೊಡಿ ಅಂತ ವಾಗ್ದಾಳಿ ನಡೆಸಿದರು.
ಎಸ್‌ಪಿ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಸರ್ಕಾರ ಹೇಳ್ತಿದೆ. ಹಾಗಾದ್ರೆ ಅಡಿಷನ್ ಎಸ್ಪಿ, ಐಜಿ ಕರ್ತವ್ಯ ಲೋಪ ಮಾಡಿಲ್ಲವಾ? ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ ಪ್ರಕರಣ ಸಂಭವಿಸಿದಾಗ ಹಲವರನ್ನು ಅಮಾನತು ಮಾಡಿದ್ದೀರಿ. ಇಲ್ಲಿ ಕೇವಲ ಎಸ್‌ಪಿ ಮೇಲೆ ಮಾತ್ರ ಕ್ರಮ ಯಾಕೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದೀರಿ. ಆದರೆ ಈಗ ಜನರೇ ನಿಮ್ಮನ್ನ ಸರ್ವನಾಶ ಮಾಡುತ್ತಾರೆ. ಈ ರಾಜ್ಯದ ಕೊನೆಯ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ. ಇದು ಕಾಂಗ್ರೆಸ್‌ನ ಕೊನೆ ಆಡಳಿತ ಬರೆದಿಟ್ಟುಕೊಳ್ಳಿ. ಅಧಿಕಾರಿಗಳನ್ನು ಗುಲಾಮರಾಗಿ ಇಟ್ಟುಕೊಂಡಿದ್ದಕ್ಕೆ ಪ್ರಾಯಶ್ಚಿತ್ತ ಅನುಭವಿಸುತ್ತೀರಿ ಎಂದು ಗುಡುಗಿದರು.

