ಒಂದೂವರೆ ವರ್ಷಗಳ ಹಿಂದೆ ಮುಹೂರ್ತ ಕಂಡ ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಮ್ 2’ ಸಿನಿಮಾ, ಆನಂತರ ಕೊರೋನಾದಿಂದಾಗಿ ಶೂಟಿಂಗ್ ಆರಂಭಿಸಿರಲಿಲ್ಲ. ಸದ್ದಿಲ್ಲದೇ ಚಿತ್ರ ತಂಡ ಇದೀಗ ಶೂಟಿಂಗ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಹೊತ್ತಿಗೆ ಚಿತ್ರೀಕರಣ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ನಿರ್ಮಾಪಕ ಸಂತೋಷ್ ಕುಮಾರ್.
ನಿರ್ದೇಶಕ ಜಯತೀರ್ಥ ‘ಬನಾರಸ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟ ರಿಷಭ್ ಶೆಟ್ಟಿ ‘ಕಾಂತಾರ’ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಹರಿಪ್ರಿಯಾ ಕೂಡ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಾರ್ಚ್ ಅಥವಾ ಏಪ್ರಿಲ್ ಹೊತ್ತಿಗೆ ಇವರೆಲ್ಲರ ಶೂಟಿಂಗ್ ಡೇಟ್ ಹೊಂದಾಣಿಕೆ ಆಗುವುದರಿಂದ ಚಿತ್ರೀಕರಣಕ್ಕೆ ತಂಡ ಹೊರಟಿದೆ.
ಬೆಲ್ ಬಾಟಮ್ 1ರಲ್ಲಿ ನಟಿಸಿದ ಬಹುತೇಕ ಕಲಾವಿದರೇ ಈ ಸಿನಿಮಾದಲ್ಲಿ ಇರಲಿದ್ದು, ಹರಿಪ್ರಿಯಾ ಅವರ ಪಾತ್ರಕ್ಕೆ ಮತ್ತಷ್ಟು ಜೀವ ತುಂಬುವ ಕೆಲಸ ಮಾಡಲಾಗಿದೆ. ನಾಯಕ ಡಿಟೆಕ್ಟಿವ್ ದಿವಾಕರ್ ಈ ಬಾರಿ ವಿಶೇಷ ಪ್ರಕರಣವೊಂದನ್ನು ಬೆನ್ನತ್ತುವುದು ವಿಶೇಷ. ಪೇದೆಯಾಗಿದ್ದ ದಿವಾಕರ್ ಈ ಸಿನಿಮಾದಲ್ಲಿ ಪ್ರಮೋಷನ್ ಪಡೆಯುತ್ತಾರಾ ಅಥವಾ ಅದೇ ಪೇದೆಯಾಗಿಯೇ ಪ್ರಕರಣ ಬೆನ್ನು ಹತ್ತುತ್ತಾರೆ ಎನ್ನುವುದು ಕುತೂಹಲ. ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸಿನಿಮಾಗೆ ಬಪ್ಪಿ ಲಹರಿ ಹಾಡು
2019ರಲ್ಲಿ ತೆರೆಕಂಡ ‘ಬೆಲ್ ಬಾಟಮ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಆಗಿತ್ತು. 25ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನ ಪ್ರದರ್ಶನ ಕಂಡಿತ್ತು. 80ರ ದಶಕದಲ್ಲಿ ನಡೆಯುವ ಕಥೆಯನ್ನು ಅಷ್ಟೇ ಸೊಗಸಾಗಿ ನಿರೂಪಿಸಿದ್ದರು ನಿರ್ದೇಶಕ ಜಯತೀರ್ಥ. ಟಿ.ಕೆ. ದಯಾನಂದ್ ಬರೆದ ಕಥೆಯು ಡಿಟೆಕ್ಟಿವ್ ದಿವಾಕರನ ಜಾಣ್ಮೆಯನ್ನು ತೋರುತ್ತಿತ್ತು. ಇದನ್ನೂ ಓದಿ: ಚೆಂಬೆಳಕಿನ ಕವಿಯನ್ನು ಸಿನಿಮಾ ರಂಗ ಅಪ್ಪಿಕೊಳ್ಳಲಿಲ್ಲ