Connect with us

Latest

ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

Published

on

ನವದೆಹಲಿ: ಈ ಸುದ್ದಿ ಓದಿದ್ರೆ ನಿಮಗೆ ಶಾಕ್ ಮತ್ತು ಸಂತೋಷ ಎರಡೂ ಆಗಬಹುದು. ಮುಂದಿನ 5 ವರ್ಷಗಳಲ್ಲಿ ಪೆಟ್ರೋಲ್ ಬೆಲೆ ಭಾರೀ ಇಳಿಕೆಯಾಗಲಿದ್ದು, 2022ರ ವೇಳೆಗೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 30 ರೂಪಾಯಿಗಿಂತ ಕಡಿಮೆ ಆಗಲಿದೆ ಎಂದು ಅಮೆರಿಕದ ಖ್ಯಾತ ಉದ್ಯಮಿ ಟೋನಿ ಸೆಬಾ ಭವಿಷ್ಯ ನುಡಿದಿದ್ದಾರೆ.

ಜಗತ್ತಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಪೆಟ್ರೋಲ್ ಮೇಲಿನ ಅವಲಂಬನೆ ಕಡಿಮೆಯಾಗಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಲಿದೆ ಎಂದು ಅವರು ಊಹಿಸಿದ್ದಾರೆ.

ಕಡಿಮೆ ಹೇಗೆ ಆಗುತ್ತೆ?
ಮುಂದಿನ ವರ್ಷ ಗಳಲ್ಲಿ ಸೆಲ್ಫ್ ಡ್ರೈವ್ ಕಾರುಗಳಿಂದಾಗಿ ತೈಲದ ಬಳಕೆ ಗಣನೀಯವಾಗಿ ಇಳಿಕೆಯಾಗಲಿದೆ. 10 ವರ್ಷದ ಒಳಗಡೆ ಒಂದು ಬ್ಯಾರೆಲ್ ತೈಲದ ಬೆಲೆ 25 ಡಾಲರ್ ತಲುಪಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಮುಂದೆ ಈಗ ಬಳಕೆಯಲ್ಲಿರುವ ಹಳೇ ಮಾದರಿಯ ಕಾರುಗಳನ್ನು ಬಳಸುವುದಿಲ್ಲ. ಸೆಲ್ಫ್ ಡ್ರೈವ್ ಎಲೆಕ್ಟ್ರಿಕ್ ಕಾರುಗಳು ಅತಿ ಹೆಚ್ಚು ಪ್ರಮಾಣದಲ್ಲಿ ರಸ್ತೆಗೆ ಇಳಿಯಲಿದೆ. ಈ ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಕಡಿಮೆ ಇರಲಿದೆ ಎಂದು ಅವರು ಹೇಳಿದ್ದಾರೆ.

2030ರ ವೇಳೆಗೆ ಶೇ.95ರಷ್ಟು ಜನ ಸ್ವಂತ ಬಳಕೆಗಾಗಿ ಕಾರನ್ನು ಇಟ್ಟುಕೊಳ್ಳುವುದಿಲ್ಲ. ಇದರಿಂದಾಗಿ ಆಟೋಮೊಬೈಲ್ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಎಲೆಕ್ಟ್ರಿಕ್ ಕಾರುಗಳು ರಸ್ತೆಗೆ ಇಳಿದ ಬಳಿಕ ಜಾಗತಿಕ ತೈಲ ಉದ್ಯಮ ಕುಸಿದು ಬೀಳಲಿದೆ ಎಂದು ಟೋನಿ ಸೆಬಾ ಭವಿಷ್ಯ ನುಡಿದಿದ್ದಾರೆ.

ಯಾರು ಈ ಟೋನಿ ಸೆಬಾ?
ಅಮೆರಿಕದ ಸಿಲಿಕಾನ್ ವ್ಯಾಲಿಯ ಉದ್ಯಮಿಯಾಗಿರುವ ಟೋನಿ ಸೆಬಾ ಸ್ಟಾಂಡ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ಮಸಾಚುಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವಿವಿಯಿಂದ ಕಂಪ್ಯೂಟರ್ ಎಂಜಿನಿಯರಿಂಗ್ ನಲ್ಲಿ ಬಿಎಸ್ ಪದವಿಯನ್ನು ಪಡೆದಿರುವ ಇವರು ಹಲವು ಪುಸ್ತಕ ಬರೆದಿದ್ದಾರೆ. ನೂರಕ್ಕೂ ಅಧಿಕ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದಾರೆ.

ಸೆಬಾ ಅವರ ಮಾತನ್ನು ನಂಬಬೇಕೇ?
ಮುಂದೆ ಸೌರಶಕ್ತಿಯ ಬಳಕೆ ಹೆಚ್ಚಾಗಲಿದೆ. ಅಷ್ಟೇ ಅಲ್ಲದೇ ಕಡಿಮೆ ದರದಲ್ಲಿ ಸೋಲಾರ್‍ನಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ಈ ಹಿಂದೆ ಟೋನಿ ಸೆಬಾ ಹೇಳಿದ್ದು ಈಗ ನಿಜವಾಗಿದೆ.

ಭವಿಷ್ಯ ನಿಜವಾಗುತ್ತಾ?
ಈಗಾಗಲೇ ಹಲವಾರು ಕಂಪೆನಿಗಳು ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿ ಪಡಿಸುತ್ತಿವೆ. ಇದರ ಜೊತೆಗೆ ಗೂಗಲ್, ಆಪಲ್ ನಂತಹ ಟೆಕ್ ದಿಗ್ಗಜ ಕಂಪೆನಿಗಳು ಸೆಲ್ಫ್ ಡ್ರೈವಿಂಗ್ ಕಾರು ತಯಾರಿಕೆಗೆ ಉತ್ತೇಜನ ನೀಡಲು ಕಾರು ತಯಾರಕಾ ಕಂಪೆನಿಗಳ ಜೊತೆ ಕೈ ಜೋಡಿಸಿವೆ. ಹೀಗಾಗಿ ಮುಂದಿನ ಕೆಲವೇ ವರ್ಷದಲ್ಲಿ ಎಲೆಕ್ಟ್ರಿಕ್ ಕಾರುಗಳು ರಸ್ತೆಯನ್ನು ಅಕ್ರಮಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ.

ಭಾರತ ಸೇರಿದಂತೆ, ಯುರೋಪ್ ಖಂಡದ ಕೆಲ ದೇಶಗಳು 2030ರ ವೇಳೆಗೆ ಪೆಟ್ರೋಲ್ ಕಾರನ್ನು ನಿಷೇಧಿಸಲು ಮುಂದಾಗಿವೆ. ನಿಷೇಧದಿಂದಾಗಿ ಕಚ್ಚಾ ತೈಲದ ಆಮದು ಕಡಿಮೆಯಾಗಲಿದ್ದು, ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ. ಬೆಲೆ ಕಡಿಮೆಯಾದರೆ ಕಚ್ಚಾ ತೈಲದಿಂದಲೇ ಈಗ ದೇಶದ ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ಅರಬ್ ದೇಶಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ.

ಮುಂದೆ ಶೇ.95ರಷ್ಟು ಜನ ಸ್ವಂತಕ್ಕಾಗಿ ಕಾರನ್ನು ಬಳಸುವುದಿಲ್ಲ ಎಂದು ಟೋನಿ ಸೆಬಾ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಈ ಮಾತು ನಿಜವಾಗಬಹುದು ಎನ್ನುತ್ತಾರೆ ಕೆಲ ಮಂದಿ. ಕ್ಯಾಬ್ ವ್ಯವಸ್ಥೆ ಆರಂಭಗೊಂಡ ಸಂದರ್ಭದಲ್ಲಿ ಸುರಕ್ಷತೆ, ಇಂಟರ್‍ನೆಟ್ ಇತ್ಯಾದಿ ವಿಚಾರಗಳನ್ನು ಹೇಳಿ ಈ ಉದ್ಯಮ ಬೇರೆ ಕಡೆ ಯಶಸ್ವಿಯಾದರೂ ಭಾರತದಲ್ಲಿ ಕಷ್ಟ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಮಹಾನಗರಗಳಲ್ಲಿ ಕ್ಯಾಬ್ ಗಳನ್ನೇ ಜನ ಹೆಚ್ಚು ಬಳಕೆ ಮಾಡುತ್ತಿದ್ದು, ಉದ್ಯಮ ಯಶಸ್ವಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನ ಕಾರು ಖರೀದಿಸದೇ ಪ್ರಯಾಣಕ್ಕಾಗಿ ಕ್ಯಾಬ್ ಕಾರುಗಳನ್ನೇ ಅವಲಂಬಿಸಿದರೆ ಆಶ್ಚರ್ಯ ಏನಿಲ್ಲ ಅಂತಾರೆ ಕೆಲವರು.

ಭಾರತದಲ್ಲಿ ಪೆಟ್ರೋಲ್ ಬೆಲೆ ನಿಗದಿಯಾಗುವುದು ಹೇಗೆ?
ಡಾಲರ್, ರೂಪಾಯಿ ವಿನಿಮಯ ಬೆಲೆ, ಅಬಕಾರಿ ಸುಂಕ, ವ್ಯಾಟ್, ಅಕ್ಟ್ರಾಯ್, ಪೆಟ್ರೋಲ್ ಪಂಪ್ ಮಾಲೀಕರ ಕಮೀಷನ್ ಲೆಕ್ಕ ಹಾಕಿ ಪೆಟ್ರೋಲ್ ದರ ಈಗ ನಿಗದಿಯಾಗುತ್ತದೆ.

ಇದನ್ನೂ ಓದಿ: ತನ್ನ ಈ ವಿಶಿಷ್ಟ ಸೇವೆಯಿಂದ ದೇಶದ ಗಮನ ಸೆಳೆದ ಮಂಗ್ಳೂರಿನ ಕ್ಯಾಬ್ ಡ್ರೈವರ್

ಇದನ್ನೂ ಓದಿ: 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

[Elite_video_player id=”1″]

Click to comment

Leave a Reply

Your email address will not be published. Required fields are marked *