ಬೆಳಗಾವಿ: ಆ ನಾಯಿಗಳನ್ನು ನೀವು ಓಡಿಸಬೇಕಲ್ಲಾ, ಕಲ್ಲು ತಗೋಂಡು ಅಂತಹ ನಾಯಿಗಳನ್ನು ಓಡಿಸಿದರೆ ನಾವು ಗಟ್ಟಿಯಾಗುತ್ತೇವೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರ ದಬ್ಬಾಳಿಕೆ ವಿರುದ್ಧ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕಿಡಿ ಕಾರಿದ್ದಾರೆ.
ಗೋಕಾಕ್ ತಾಲೂಕಿನ ಪಾಮಲದಿನ್ನಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಬಳಿ ಸ್ಥಳೀಯ ಮಹಿಳೆ ಕಮಲವ್ವಾ ನಿರ್ವಾಣಿ ಅಳಲು ತೊಡಗಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಬಳಿ ಅಳಲು ತೊಡಿಕೊಳ್ಳಲು ಹೋದರೆ ಬೆಂಬಲಿಗರು ಹುಚ್ಚು ನಾಯಿಗೆ ಕಲ್ಲು ಎಸೆದಂತೆ ನಡೆಯಿರಿ ಎಂದು ಕಳುಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ರಮೇಶ್ ಬೆಂಬಲಿಗರಿಂದಾಗಿ ಗೋಕಾಕ್ ಕ್ಷೇತ್ರದಲ್ಲಿ ಬಡವರಿಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಕಮಲವ್ವಾ ಹೇಳಿದ್ದಕ್ಕೆ, ಇಂತಹ ನಾಯಿಗಳನ್ನು ಕಲ್ಲಿನಲ್ಲಿ ಹೊಡೆದು ಓಡಿಸಬೇಕು ಎಂದು ಹೇಳುವ ಮೂಲಕ ರಮೇಶ್ ಅಳಿಯ ಅಂಬಿರಾವ್ ಮತ್ತು ಬೆಂಬಲಿಗರನ್ನು ಸತೀಶ್ ಜಾರಕಿಹೊಳಿ ನಾಯಿಗೆ ಹೋಲಿಸಿದ್ದಾರೆ.
Advertisement
Advertisement
ನಾವು ಮನವಿ ಮಾಡಿದರೂ ಅವರು ಅರ್ಧಂಬರ್ಧ ಕೆಲಸ ಮಾಡಿ ಹೋಗಿದ್ದಾರೆ ಎಂದು ಕಮಲವ್ವಾ ಆರೋಪಿಸಿದ್ದಾರೆ. ಇದಕ್ಕೆ ಗ್ರಾಮಸ್ಥರೊಬ್ಬರು ಪ್ರತಿಕ್ರಿಯಿಸಿ, ಜೆಸಿಬಿಯಿಂದ ಕೇವಲ ಐದು ತಾಸು ಕೆಲಸ ಮಾಡಿ ಹೋಗಿದ್ದಾರೆ. ಹೀಗಾಗಿ ನಾವೇ ಸೇರಿ ಸೇತುವೆ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
Advertisement
ವೃದ್ಧ ಮಹಿಳೆ ಅವರ ಬಳಿ ಏನೇ ಸಮಸ್ಯೆ ಕೇಳಿದಾಗ ದುಡ್ಡು ಮಾತ್ರ ತಗೊಂಡು ವೋಟ್ ಹಾಕಿಲ್ಲ ಎಂದು ಹೇಳುತ್ತಾರೆ. ನಾವು ಏನೇ ಕೇಳಲು ಹೋದರೂ ಹುಚ್ಚು ನಾಯಿ ಓಡಿಸಿದಂತೆ ಓಡಿಸುತ್ತಾರೆ. ಬಡವರಿಗೆ ಏನೋ ಕಿಮ್ಮತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಸತೀಶ್ ಜಾರಕಿಹೊಳಿ ಮಧ್ಯ ಪ್ರವೇಶಿಸಿ, ಆ ನಾಯಿಗಳನ್ನು ಓಡಿಸಬೇಕಲ್ಲ, ಅವುಗಳನ್ನು ಓಡಿಸಿದರೆ ನಾವು ಗಟ್ಟಿ ಆಗುತ್ತೇವೆ ಎಂದಾಗ ಕಮಲವ್ವಾ ಪ್ರತಿಕ್ರಿಯಿಸಿ, ನಾವು ಗಟ್ಟಿ ಇದ್ದೇವೆ ನಾಯಿಗಳನ್ನು ಓಡಿಸುತ್ತೇವೆ. ಅದಕ್ಕೆ ನಾವು ಗಟ್ಟಿ ಅದೀವಿ. ನೀವು ಏನೂ ವಿಚಾರ ಮಾಡಬೇಡಿ ಎಂದು ಹೇಳಿದ್ದಾರೆ.
ಇಪ್ಪತ್ತು ವರ್ಷದಿಂದ ಗ್ರಾಮಕ್ಕೆ ರಸ್ತೆ, ಸೇತುವೆ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಅರ್ಧಂಬರ್ಧ ಕೆಲಸ ಮಾಡಿ ಅದರ ಹೆಸರ ಮೇಲೆ ಸಾಕಷ್ಟು ಹಣ ಪಡೆದುಕೊಂಡಿದ್ದಾರೆ. ಕೆಲಸ ಅರ್ಧ ಆಗಿದ್ದಕ್ಕೆ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಗ್ರಾಮಸ್ಥರೆಲ್ಲರೂ ಸೇರಿ ಹಣ ಹಾಕಿ ರಸ್ತೆ ಮಾಡಿಕೊಂಡಿದ್ದೇವೆ ಮಹಿಳೆ ಆರೋಪಿಸಿದ್ದಾರೆ.
ಏನಾದರೂ ಕೇಳಿದರೆ ನೀವು ಹಾಗೆ ಮತ ಹಾಕಿಲ್ಲ ದುಡ್ಡು ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಬಡವರಿಗೆ ಮನೆ ಕಟ್ಟಿಕೊಡಲು ಇಪ್ಪತ್ತೈದು ಸಾವಿರ ಲಂಚ ಪಡೆಯುತ್ತಾರೆ. ನಾನು ಆಸ್ಪತ್ರೆಯಲ್ಲಿದ್ದರೂ ನನ್ನ ಬಳಿ ಬಂದು ಶಾಸಕರ ಬೆಂಬಲಿಗರು ಹಣ ಕೇಳಿದ್ದರು. ಆಸ್ಪತ್ರೆಯಲ್ಲೇ ಅವರಿಗೆ ದಬಾಯಿಸಿ ಕಳುಹಿಸಿದ್ದೆ. ನಾನು ಇಂದಿಗೂ ತಾಡಪಲ್ ಕಟ್ಟಿಕೊಂಡು ಜೀವನ ಮಾಡುತ್ತಿದ್ದೇನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ನೀನೇ ಲೀಡ್ ತೆಗೆದುಕೊಂಡು ಗಟ್ಟಿಯಾಗಿ ನಿಲ್ಲು. ನಿಮ್ಮ ಜೊತೆಗೆ ನಾನಿರುತ್ತೇನೆ. ನಿಮಗೆ ಏನು ಬೇಕು ನಾನು ಮಾಡಿಕೊಡುತ್ತೇನೆ ಎಂದು ಮಹಿಳೆ ಕಮಲವ್ವಗೆ ಅಭಯ ನೀಡಿದ್ದಾರೆ.
ಹರಿಯುವ ಹಳ್ಳದ ನೀರಿನಲ್ಲೇ ನಿಂತು ಮಹಿಳೆ ಅಳಲು ತೊಡಿಕೊಂಡಿದ್ದು, ಹಳ್ಳದ ದಂಡೆಯಲ್ಲಿನ ಕಲ್ಲಿನ ಮೇಲೆ ಕುಳಿತು ಸತೀಶ್ ಜಾರಕಿಹೊಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದಾರೆ. ಕಮಲವ್ವ ಅಳಲು ತೊಡಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.