ತುಮಕೂರು: ತಂದೆ-ತಾಯಿಯನ್ನು ಕಳೆದುಕೊಂಡು ಅನಾಥ ಜೀವನ ನಡೆಸುತ್ತಿರುವ ಈ ಮಕ್ಕಳು ವಿದ್ಯಾಶ್ರೀ ಮತ್ತು ಕುಶಾಲ್. ತುಮಕೂರು ಜಿಲ್ಲೆ ಸಿರಾ ತಾಲೂಕಿನ ಮೊಸರುಕುಂಟೆ ಗ್ರಾಮದವರು. ಮದ್ಯ ವ್ಯಸನಿಗಳಾಗಿದ್ದ ಈ ಮಕ್ಕಳ ತಂದೆ-ತಾಯಿ ವರ್ಷದ ಹಿಂದೆ ಸಾವನ್ನಪ್ಪಿದರು. ಅಂದಿನಿಂದ ಈ ಅನಾಥರಿಗೆ ದಿಕ್ಕು ಅಜ್ಜಿ ಹನುಮಕ್ಕ ಒಬ್ಬರೇ.
ಬಡತನದಲ್ಲಿದ್ದರೂ ವಿದ್ಯಾಶ್ರೀ ಹೆಸರಿಗೆ ತಕ್ಕಂತೆ ಶಾಲೆಯಲ್ಲಿ ಎಲ್ಲರಿಗಿಂತ ಚೆನ್ನಾಗಿ ಓದುತ್ತಿದ್ದಾಳೆ. ಮನೆಯಲ್ಲಿ ತನ್ನ ತಮ್ಮ ಕುಶಾಲ್‍ನ ಹಾರೈಕೆ ಜೊತೆಗೆ ತನ್ನ ಜೀವನವನ್ನು ತಾನೇ ನೋಡಿಕೊಳ್ಳುತ್ತಿದ್ದಾಳೆ. ಮದ್ಯಪಾನದಿಂದ ಮೃತರಾದ ತನ್ನ ತಂದೆ-ತಾಯಿಯ ಸಾವಿನಿಂದ ತನಗಾದ ನೋವು ಯಾರಿಗೂ ಆಗುವುದು ಬೇಡವೆಂದು ಪ್ರಧಾನಿ ಮೋದಿಯವರಿಗೆ ಮದ್ಯಪಾನ ನಿಷೇಧಿಸಿ ಎಂದು ಪತ್ರ ಬರೆಯಲು ವಿದ್ಯಾಶ್ರೀ ಚಿಂತನೆ ನಡೆಸಿದ್ದಾಳೆ.
Advertisement
ಮೊಸರುಕುಂಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಶ್ರೀ 6ನೇ ತರಗತಿ ಓದುತ್ತಿದ್ದು, ತಮ್ಮ ಕುಶಾಲ್ 1ನೇ ತರಗತಿ ಓದುತ್ತಿದ್ದಾನೆ. ವಿದ್ಯಾಶ್ರೀಯ ಬಡತನ ಕಂಡ ಶಾಲೆಯ ಶಿಕ್ಷಕರೇ ಕೈಲಾದ ಸಹಾಯ ಮಾಡುತ್ತಿದ್ದಾರೆ. ಬಟ್ಟೆಯ ಜೊತೆಗೆ ಈ ಮಕ್ಕಳಿಗೆ ಊಟಕ್ಕೂ ತೊಂದರೆಯಿದೆ. ಜೊತೆಗೆ ಹಳೇ ಮನೆಯಲ್ಲಿ ಮಕ್ಕಳಿದ್ದು, ಮಳೆ ಬಂದಾಗ ಸೋರುತ್ತದೆ. ಹೀಗಾಗಿ ವಿದ್ಯಾಶ್ರೀ ಮತ್ತು ಆಕೆಯ ತಮ್ಮನಿಗೆ ಒಂದು ಸೂರಿನ ಅವಶ್ಯಕತೆ ಇದೆ.
Advertisement
ಚಿಕ್ಕ ವಯಸ್ಸಿನಲ್ಲಿಯೇ ಅಪ್ಪ-ಅಮ್ಮನ ಪ್ರೀತಿ ಕಳೆದುಕೊಂಡು, ಸ್ನೇಹಿತರೊಂದಿಗೆ ಆಟವಾಡಬೇಕಾದ ವಯಸ್ಸಿನಲ್ಲಿ ತಮ್ಮನ ಜೊತೆಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಜವಬ್ದಾರಿ ವಿದ್ಯಾಶ್ರೀ ಮೇಲಿದೆ. ಶಾಲೆಯಲ್ಲಿ ಕೊಟ್ಟ ಸಮವಸ್ತ್ರದ ಜೊತೆಗೆ ಅವರಿವರು ಕೊಟ್ಟೆ ಹಳೇ ಬಟ್ಟೆಯುಟ್ಟುಕೊಂಡೇ ವಿದ್ಯಾಶ್ರೀ ಶಾಲೆಗೆ ಹೋಗುತ್ತಾಳೆ. ಈ ಮುದ್ದು ಮಕ್ಕಳಿಗೆ ತಲೆಗೊಂದು ಸೂರು ಮತ್ತು ಕಲಿಯಲು ಶಿಕ್ಷಣದ ಆಸರೆ ಬೇಕಿದೆ.
Advertisement