ಬೀದರ್: ಗ್ರಾಮೀಣ ಪ್ರತಿಭೆಗಳು ಮನಸ್ಸು ಮಾಡಿದರೆ ಏನು ಬೇಕಾದ್ರು ಸಾಧನೆ ಮಾಡಿ ತೋರಿಸುತ್ತಾರೆ ಎಂಬುದಕ್ಕೆ ಇದು ಒಂದು ನೈಜ ಉದಾಹರಣೆಯಾಗಿದೆ.
ಒಂದು ವರ್ಷ ಹಿಂದೆ ಪೋಷಕರನ್ನು ಕಳೆದುಕೊಂಡು, ಒಂದು ಹೊತ್ತಿನ ಊಟ, ಮಲಗಲು ಸ್ವಲ್ಪ ಜಾಗಕ್ಕೂ ಕಷ್ಟ ಪಟ್ಟು, ಜೊತೆಗೆ ವಿಕಲಚೇತನ ತಮ್ಮನ ಮಾಸಾಶನದಲ್ಲಿ ಮನೆ ಬಾಡಿಗೆ ಕಟ್ಟಿಕೊಂಡು ವ್ಯಾಸಂಗ ಮಾಡುತ್ತಿರುವ ಯುವ ಪ್ರತಿಭೆಯೇ ಸತೀಶ್. ಬೀದರ್ ನಗರದ ಶಾಹಗಾಂವ್ ನಿವಾಸಿಯಾದ ಸತೀಶ್ ಈ ವರ್ಷದ ಮೆಡಿಕಲ್ ಪ್ರವೇಶ ಪರೀಕ್ಷೆಯಲ್ಲಿ 2360 ನೇ ರ್ಯಾಂಕ್ ಗಳಿಸುವ ಮುಲಕ ಬೀದರ್ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಪ್ರವೇಶ ಪಡೆದು ಅಪ್ರತಿಮ ಸಾಧನೆ ಮಾಡಿದ್ದಾರೆ.
Advertisement
ಒಂದು ವರ್ಷದ ಹಿಂದೆ ಪೋಷಕರನ್ನು ಕಳೆದುಕೊಂಡರೂ ಕಷ್ಟಪಟ್ಟು ಓದಿ ಈ ಸಾಧನೆ ಮಾಡಿದ್ದಾರೆ. ದಾನಿಗಳ ಸಾಹಾಯದಿಂದ 30 ಸಾವಿರ ರೂ. ಶುಲ್ಕವನ್ನು ಕಾಲೇಜಿಗೆ ಕಟ್ಟಿದ್ದಾರೆ. ಆದರೆ ಹಾಸ್ಟೆಲ್ ಶುಲ್ಕ 20 ಸಾವಿರ ಕಟ್ಟಬೇಕಿದೆ. ಆದ್ದರಿಂದ ಬೆಳಕು ಕಾರ್ಯಕ್ರಮಕ್ಕೆ ಸಹಾಯ ಕೇಳಿಕೊಂಡು ಬಂದಿದ್ದಾರೆ.
Advertisement
ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಹೀರೆಮಠ ಎಂಬ ಶಿಕ್ಷಕರು ಕೈಲಾದಷ್ಟು ಸಹಾಯ ಮಾಡುತ್ತಾ ಬೆನ್ನೆಲುಬಾಗಿ ನಿಂತಿದ್ದಾರೆ. ಆದರೆ ಹಾಸ್ಟೆಲ್ ಶುಲ್ಕ, ಪುಸ್ತಕ ಮತ್ತು ವೈದ್ಯಕೀಯ ಉಪಕರಣಗಳಿಗೆ ಈಗ ಸಹಾಯ ಬೇಕಾಗಿದೆ. ಒಂದೆಡೆ ವಿಧಿಯ ಅಟ್ಟಹಾಸ, ಮತ್ತೊಂದೆಡೆ ಕಡುಬಡತನ ಇದ್ದರೂ ಹಗಲು ರಾತ್ರಿ ಎನ್ನದೇ ಓದಿ ಸಾಧನೆ ಮಾಡುತ್ತಿರುವ ಈ ಗ್ರಾಮೀಣ ಪ್ರತಿಭೆಗೆ ಸಹಾಯ ಮಾಡಿ ಎಂದು ಹೀರೆಮಠ ಅವರು ಕೇಳಿಕೊಂಡಿದ್ದಾರೆ.
Advertisement
ಪೋಷಕರ ಸಾವಿನ ದುಃಖದ ನಡುವೆಯೂ ಎದೆಗುಂದದೆ ಓದಿ ಮೇಡಿಕಲ್ ಸೀಟು ಪಡೆದಿರುವ ಸತೀಶ್ ಅದೆಷ್ಟೋ ಉಳ್ಳವರ ಮಕ್ಕಳಿಗೆ ಮಾದರಿಯಾಗಿದ್ದಾರೆ. ಈಗ ಇದೊಂದು ಸಹಾಯ ಸಿಕ್ಕರೆ ಈ ಗ್ರಾಮೀಣ ಪ್ರತಿಭೆಯ ಜೀವನದಲ್ಲಿ ಬೆಳಕು ಮೂಡುತ್ತದೆ ಎಂಬುದಷ್ಟೆ ನಮ್ಮ ಕಳಕಳಿಯಾಗಿದೆ.