ವಿಜಯಪುರ: ಹುಟ್ಟಿದಾಗ ಚೆನ್ನಾಗಿಯೇ ಇದ್ದ ಮಗ ಬೆಳೆಯುತ್ತಲೆ ಕೈ ಕಾಲು ಸ್ವಾಧೀನವನ್ನು ಕಳೆದುಕೊಂಡಿದ್ದಾನೆ. ಇಷ್ಟು ಮಾತ್ರವಲ್ಲದೇ ಸೊಂಟದ ಸ್ವಾಧೀನವನ್ನೂ ಕೂಡ ಕಳೆದುಕೊಂಡಿದ್ದಾನೆ. ಈ ಎಲ್ಲ ನೋವು ಹೆತ್ತವರಿಗೆ ಒಂದು ಕಡೆ ಆದರೆ ಮಗನ ಚಿಕಿತ್ಸೆಗೆ ದುಡ್ಡಿಲ್ಲದಿರುವುದು ಇನ್ನೊಂದೆಡೆ. ಇದರಿಂದ ನೊಂದ ಬಾಲಕನ ತಂದೆ ತಾಯಿ ಇದೀಗ ಪಬ್ಲಿಕ್ ಟಿವಿ ಮೊರೆ ಬಂದಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾತಲಗಾವ ಪಿಐ ಗ್ರಾಮದ ಶ್ರೀಶೈಲ ಮತ್ತು ನೀಲಮ್ಮ ದಂಪತಿಯ ಮಗ ಸಂದೀಪ ತನ್ನ ಬಾಳಿನಲ್ಲಿ ಬೆಳಕು ಕಾಣುವ ಕನಸಲ್ಲಿದ್ದಾನೆ. ಹೆಸರಿನಲ್ಲಿ ದೀಪವಿದ್ದರು ಸಂದೀಪನ ಬಾಳಲ್ಲಿ ಬೆಳಕಿಲ್ಲದಂತಾಗಿದೆ. ಸಂದೀಪ ಹುಟ್ಟಿದಾಗಿನಿಂದ ಮೂರು ವರ್ಷದವರೆಗೆ ಚೆನ್ನಾಗಿಯೇ ಇದ್ದ. ಅಂಗನವಾಡಿಗೂ ಹೋಗ್ತಿದ್ದ. ಆರು ತಿಂಗಳ ಹಿಂದೆ ಸಂದೀಪಗೆ ಫಿಟ್ಸ್ ಬಂದಿತ್ತು. ನಂತರ ಒಂದು ತಿಂಗಳಿಗೆ ಏಕಾಏಕಿ ಸಂದೀಪನ ಕೈ, ಕಾಲು ಸ್ವಾಧೀನ ಕಳೆದುಕೊಂಡಿವೆ.
Advertisement
ಆ ಸಂದರ್ಭದಲ್ಲಿ ಸಂದೀಪನ ತಂದೆ ಶ್ರೀಶೈಲ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ನಂತರ ಇತ್ತೀಚೆಗೆ ಅಂದ್ರೆ ಎರಡು ತಿಂಗಳ ಹಿಂದೆ ಸೊಂಟದ ಸ್ವಾಧೀನವೂ ಕಳೆದುಕೊಂಡಿದ್ದು, ಸಂದೀಪನ ತಂದೆ ತಾಯಿ ಕಂಗಾಲಾಗಿದ್ದಾರೆ. ಎದೆಯುದ್ದ ಬೆಳೆದ ಮಗ ಈ ರೀತಿ ದಿನನಿತ್ಯ ಒಂದಿಲ್ಲೊಂದು ದೇಹದ ಭಾಗಗಳ ಸ್ವಾಧೀನ ಕಳೆದುಕೊಳ್ಳುತ್ತಿರುವುದು ಆತಂಕಕ್ಕೀಡುಮಾಡಿದೆ.
Advertisement
ಮಗನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಹೋಗಲು ವೈದ್ಯರು ಸೂಚಿಸಿದ್ದು ದುಡ್ಡಿಲ್ಲದೆ ಸುಮ್ಮನಾಗಿದ್ದಾರೆ. ಹೀಗಾಗಿ ಸಹಾಯ ಹಸ್ತಕ್ಕಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆಗೆ ಶ್ರೀಶೈಲ ಕುಟುಂಬ ಬಂದಿದೆ. ಇವರ ಈ ತೊಂದರೆ ಬೆಳಕು ಕಾರ್ಯಕ್ರಮದ ಮುಖಾಂತರ ನಿವಾರಣೆ ಆಗಲಿದೆ ಅನ್ನೊದು ಇವರ ವಿಶ್ವಾಸ. ಯಾರಾದರು ದಾನಿಗಳು ಮುಂದೆ ಬಂದು ಸಂದೀಪನ ಬಾಳಲ್ಲಿ ಮತ್ತೆ ದೀಪ ಬೆಳಗಲಿ ಅನ್ನೋದು ನಮ್ಮ ಆಶಯ.