ತಂದೆಯ ನಿಧನದಿಂದ ಎಂಜಿನಿಯರಿಂಗ್ ಕನಸಿಗೆ ಕುತ್ತು:ವಿದ್ಯಾಭ್ಯಾಸಕ್ಕಾಗಿ ಬೇಕಿದೆ ಸಹಾಯ

Public TV
1 Min Read
BELAKU SMG 01

ಶಿವಮೊಗ್ಗ: ಸಿಇಟಿಯಲ್ಲಿ 699ನೇ ಶ್ರೇಯಾಂಕ ಗಳಿಸಿದ ಹಿನ್ನೆಲೆಯಲ್ಲಿ ತಂದೆ ಮಗನನ್ನು ಎಂಜಿನಿಯರಿಂಗ್ ಕಳುಹಿಸಿದ್ರು. ಆದ್ರೆ ಈಗ ಮನೆಗೆ ಆಧಾರವಾಗಿದ್ದ ತಂದೆ ಮೃತಪಟ್ಟಿದ್ದು ಈಗ ಮಗನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ.

ಲೋಕೋಪಯೋಗಿ ಇಲಾಖೆಯ ಕ್ವಾರ್ಟರ್ಸ್ ನಲ್ಲಿ ಪುಟ್ಟ ಮನೆಯಲ್ಲಿ ಶೀಲಾ ದೇವೇಂದ್ರಪ್ಪ ದಂಪತಿ ವಾಸವಾಗಿದ್ದರು. ಆದರೆ ಮೂರು ತಿಂಗಳ ಹಿಂದಷ್ಟೇ ದೇವೇಂದ್ರಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದೇವೇಂದ್ರಪ್ಪ ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. 31 ವರ್ಷಗಳ ಕಾಲ ಕೆಲಸ ಮಾಡಿದರೂ ದಿನಗೂಲಿಯಾಗಿಯೇ ಉಳಿದರು. ಇವರಿಗೀಗ ಮನೆಯ ಆಧಾರ ಸ್ಥಂಭವೇ ಕುಸಿದು ಹೋದಂತಾಗಿದೆ.

ಸರ್ಕಾರಿ ನಿಯಮಗಳ ಪ್ರಕಾರ ದಿನಗೂಲಿ ನೌಕರರು ಸೇವೆಯಲ್ಲಿದ್ದು ಮೃತಪಟ್ಟರೆ ಆವರ ಕುಟುಂಬದವರಿಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಸದ್ಯಕ್ಕೆ ಇಲಾಖೆಯ ಕ್ವಾರ್ಟರ್ಸ್‍ನಲ್ಲಿ ವಾಸವಾಗಿರಲು ಹಿರಿಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆದಿದ್ದಾರೆ. ಇವರ ಇಬ್ಬರು ಮಕ್ಕಳಲ್ಲಿ ಹಿರಿಯ ಮಗ ರಾಕೇಶ್ ಸಿಇಟಿನಲ್ಲಿ 699ನೇ ಶ್ರೇಯಾಂಕ ಪಡೆಯುವ ಮೂಲಕ ಮೇರಿಟ್ ಸೀಟು ಪಡೆದು ಮೈಸೂರು ಜೆಎಸ್‍ಎಸ್‍ನಲ್ಲಿ ಎಂಜಿನಿಯರಿಂಗ್ 3ನೇ ಸೆಮಿಸ್ಟರ್ ಓದುತ್ತಿದ್ದರೆ, ಕಿರಿಯ ಮಗ ಗಿರೀಶ್ ಈಗ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ.

ಅಪ್ಪ ಅಕಾಲಿಕವಾಗಿ ಮೃತಪಟ್ಟ ಕಾರಣದಿಂದ ರಾಕೇಶ್ ಎಂಜಿನಿಯರ್ ಆಗಬೇಕು ಎಂಬ ಕನಸಿಗೆ ಕುತ್ತು ಬಂದಿದೆ. ಅಪ್ಪ ಉದ್ಯೋಗದಲ್ಲಿ ಇದ್ದ ಆಧಾರದಲ್ಲಿ ಬ್ಯಾಂಕ್‍ನಲ್ಲಿ ಒಂದೂವರೆ ಲಕ್ಷ ರೂ. ಶಿಕ್ಷಣ ಲೋನ್ ಮಾಡಿಸಿದ್ದರು. ದೇವೇಂದ್ರ ಅವರ ನಿಧನದಿಂದಾಗಿ ಈ ವರ್ಷ ಲೋನ್ ಸಿಗುವುದಿಲ್ಲ ಎಂದು ಬ್ಯಾಂಕಿನವರು ಹೇಳಿದ್ದಾರೆ. ದೇವೆಂದ್ರ ಅವರ ಪತ್ನಿ ಶೀಲಾ ಕೆಲವು ಬ್ಯಾಂಕುಗಳಲ್ಲಿ ಕಂಪ್ಯೂಟರ್ ಸ್ವಚ್ಛ ಮಾಡುವ ಕೆಲಸ ಮಾಡುತ್ತಾ ತಿಂಗಳಿಗೆ ನಾಲ್ಕೈದು ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇದೇ ಸಂಪಾದನೆಯಲ್ಲಿ ಇಡೀ ಮನೆ ನಡೆಯಬೇಕಾಗಿದೆ.

ಈಗ ರಾಕೇಶ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳ್ಳಲು ಇನ್ನೂ 2 ವರ್ಷ ವಾರ್ಷಿಕ 1.20 ಲಕ್ಷ ರೂಪಾಯಿ ನೆರವು ಬೇಕಾಗಿದೆ. ಎರಡನೇ ಮಗನೂ ಎಂಜಿನಿಯರ್ ಆಗಬೇಕು ಎಂಬ ಕನಸಿಟ್ಟುಕೊಂಡು ಶ್ರಮಪಟ್ಟು ಓದುತ್ತಿದ್ದಾನೆ. ಇವರಲ್ಲಿ ಯಾರೊಬ್ಬರಿಗೆ ನೆರವಾದರೂ ಅಷ್ಟೇ ಸಾಕು ಎನ್ನುತ್ತಿದ್ದಾರೆ ಶೀಲಾ.

Share This Article