ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶ ಮತ್ತು ಕರ್ನಾಟಕ ಗಡಿ ಭಾಗದಲ್ಲಿರುವ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಂಜಯ್ಯಗಾರಹಳ್ಳಿ ಗ್ರಾಮದ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ಸ್ಥಳೀಯ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ. ಈ ಶಾಲೆಯ ಅಭಿವೃದ್ಧಿಗೆ ಕಾರಣ ಶಿಕ್ಷಕ ನಾಗೇಶ್. ಶಿಕ್ಷಕರಾದ ನಾಗೇಶ್ ಕಳೆದ 11 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕದಲ್ಲೇ ಈ ಗ್ರಾಮವಿದ್ದರೂ ಇಲ್ಲಿನ ಜನರ ಆಡು ಭಾಷೆ ತೆಲುಗು. ಇಲ್ಲಿನ ಜನ ತಾವು ಆಂಧ್ರದವರೇ ಎನ್ನುವಷ್ಟು ಭಾವನೆಗಳಲ್ಲಿ ಬದುಕುತ್ತಿದ್ರು. ಈ ಶಾಲೆಗೆ ಶಿಕ್ಷಕರಾಗಿ ನಾಗೇಶ್ ಬಂದಾಗ ಇಲ್ಲಿನ ಬಹುತೇಕ ಮಕ್ಕಳಿಗೆ ಕನ್ನಡ ಮಾತನಾಡಲು ಕೂಡ ಬರುತ್ತಿರಲಿಲ್ಲ. ಕನಿಷ್ಠ ಇಲ್ಲಿನ ಜನ ತಮ್ಮ ಮಕ್ಕಳನ್ನ ಶಾಲೆಗೆ ಕೂಡ ಕಳುಹಿಸುತ್ತಿರಲಿಲ್ಲ. ಆದ್ರೆ ಮನಸ್ಸಿದ್ದರೆ ಮಾರ್ಗ ಎಂಬಂತೆ ಶಿಕ್ಷಕ ನಾಗೇಶ್ ಗ್ರಾಮದಲ್ಲೇ ವಾಸ ಮಾಡುವ ಮೂಲಕ, ಗ್ರಾಮದ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನ ತಿಳಿಸಿದರು. ಪೋಷಕರ ಮನವೊಲಿಸಿ ಎಲ್ಲಾ ಮಕ್ಕಳನ್ನ ಶಾಲೆಗೆ ಕರೆತಂದು ಸತ್ಪ್ರಜೆಗಳನ್ನ ಮಾಡುವ ಕಾಯಕಕ್ಕೆ ಮುಂದಾದರು.
ಪ್ರತಿ ವರ್ಷ ಶಾಲೆಯಲ್ಲಿ ಕನ್ನಡದ ನುಡಿ ಹಬ್ಬ ಆಚರಿಸುವ ಮೂಲಕ ಗ್ರಾಮಸ್ಥರಲ್ಲಿ ಕನ್ನಡದ ಕಂಪು ಸೂಸುವ ಕೆಲಸ ಮಾಡುತ್ತಿದ್ದಾರೆ. ತೆಲುಗು ಭಾಷೆಯ ಪ್ರಭಾವದಿಂದ ಕನ್ನಡವೇ ಬಾರದ ಮಕ್ಕಳ ಬಾಯಲ್ಲಿ ಕನ್ನಡದ ಕಿಚ್ಚು ಹಚ್ಚಿದ್ದಾರೆ. ಹತ್ತು ವರ್ಷಗಳಿಂದ ಒಂದಲ್ಲ ಒಂದು ರೀತಿ ಭಿನ್ನ ವಿಭಿನ್ನ ಪ್ರಯತ್ನಗಳಿಂದ ಇಡೀ ಶಾಲೆಯನ್ನ ಮಾದರಿ ಶಾಲೆಯನ್ನಾಗಿ ಮಾಡಿದ ಕೀರ್ತಿ ಶಿಕ್ಷಕ ನಾಗೇಶರದ್ದು. ಅಸಲಿಗೆ ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿ ಹೋಗಿದ್ದ ಈ ಶಾಲೆಗೆ ಸಹೃದಯಿ ದಾನಿಗಳು ಹಾಗೂ ಸ್ನೇಹಿತರ ಬಳಗದಿಂದ, ಅಳಿವಿನಂಚಿಗೆ ಸಾಗುತ್ತಿದ್ದ ಸರ್ಕಾರಿ ಶಾಲೆಗೆ ಒಂದಷ್ಟು ಸೌಲಭ್ಯಗಳನ್ನ ಪಡೆದುಕೊಳ್ಳುವಲ್ಲಿ ಶಿಕ್ಷಕ ನಾಗೇಶ್ ಸಫಲರಾಗಿದ್ದಾರೆ.
ದಾನಿಗಳ ನೆರವಿನಿಂದ ಪಡೆದ ಪ್ರೊಜೆಕ್ಟರ್ ಮೂಲಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೂಡ ನಡೆಸುತ್ತಿದ್ದಾರೆ. ಕಂಪ್ಯೂಟರ್‍ನ್ನೇ ಕಾಣದ ಮಕ್ಕಳ ಕೈ ಹಿಡಿದು ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದಾರೆ. ಕನಿಷ್ಠ ಕನ್ನಡವೂ ಬಾರದ ಮಕ್ಕಳ ಬಾಯಲ್ಲಿ ಇಂದು ಪಟಪಟನೆ ಇಂಗ್ಲೀಷ್ ಮಾತನಾಡುವಷ್ಟರ ಮಟ್ಟಿಗೆ ಬೆಳೆಸಿದ್ದಾರೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳೇ ಇಲ್ಲದ ಈ ಶಾಲೆಯಲ್ಲಿ ಇಂದು 1 ರಿಂದ 7 ನೇ ತರಗತಿಯವರೆಗೂ 114 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಪ್ರತಿ ವರ್ಷ ತಮ್ಮ ಫೇಸ್ ಬುಕ್ ಗೆಳೆಯರ ಬಳಗದಿಂದ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನ ಸಹಾಯ ಪಡೆಯುವ ಶಿಕ್ಷಕ ನಾಗೇಶ್ ವಿದ್ಯಾರ್ಥಿಗಳಿಗೆ ಇಡೀ ವರ್ಷ ಉಚಿತ ನೋಟ್ ಪುಸ್ತಕ್ ಸೇರಿದಂತೆ ಪೆನ್, ಪೆನ್ಸಿಲ್., ರಬ್ಬರ್ ಹೀಗೆ ಎಲ್ಲಾ ಕಲಿಕಾ ಸಾಮಾಗ್ರಿಗಳನ್ನ ನೀಡುತ್ತಾರೆ. ಇನ್ನೂ ಕುಡಿಯುವ ನೀರಿನಿಂದ ಹಿಡಿದು ಆಡುಗೆಗೆ ಬೇಕಾದ ಗ್ರೈಂಡರ್, ತಟ್ಟೆ, ಲೋಟ, ವಾಟರ್ ಫಿಲ್ಟರ್ ಸೇರಿದಂತೆ ಶಾಲೆಗೆ ಬೇಕಾದ ಸಕಲ ಸೌಲಭ್ಯಗಳನ್ನ ದಾನ ಪಡೆದು ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ.
ಶಿಕ್ಷಕರ ಕೊರತೆ ಕಾರಣ ಖಾಸಗಿ ಶಾಲೆಯ ಶಿಕ್ಷಕರಾಗಿದ್ದ ತಮ್ಮ ಪತ್ನಿಯನ್ನೇ ತಮ್ಮ ಶಾಲೆಯಲ್ಲಿ ಉಚಿತವಾಗಿ ಭೋಧನೆ ಮಾಡಿಸುತ್ತಿದ್ದಾರೆ. ಪತಿಯ ಸಮಾಜಮುಖಿ ಕಾರ್ಯಕ್ಕೆ ಪತ್ನಿ ಶೈಲಜಾ ಕೂಡ ಸಾಥ್ ಕೊಟ್ಟಿದ್ದಾರೆ. ಆದ್ರೆ ಇಂತಹ ಶಾಲೆಯಲ್ಲಿ 114 ಮಕ್ಕಳಿಗೆ ತಕ್ಕಂತೆ ಡೆಸ್ಕ್ ಗಳ ಕೊರತೆ ಇದೆ. ಹೀಗಾಗಿ ಕೆಲ ಮಕ್ಕಳು ಡೆಸ್ಕ್ ಗಳ ಮೇಲೆ ಕೂತು ಪಾಠ ಕೇಳಿದ್ರೇ ಕೆಲವರು ನೆಲದಲ್ಲೇ ಕೂರಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಹೀಗಾಗಿ ಯಾರಾದ್ರೂ ಸಹೃದಯಿ ದಾನಿಗಳು ತಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ 12 ಡೆಸ್ಕ್ ಗಳನ್ನ ಕೊಡಿಸಿ ಅಂತ ಬೆಳಕು ಕಾರ್ಯಕ್ರಮದ ಮೂಲಕ ಮನವಿ ಮಾಡುತ್ತಿದ್ದಾರೆ.
https://youtu.be/VusB20dZ_WE