ತುಮಕೂರು: ಒಂದು ವರ್ಷದ ಮಗುವಿದ್ದಾಗ ಪೊಲೀಯೋಗೆ ತುತ್ತಾಗಿ ಕೈಕಾಲುಗಳೆರಡೂ ಸ್ವಾಧೀನ ಕಳೆದುಕೊಂಡಿರುವ ಯುವಕ ನಂದೀಶ್. ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದೊಡ್ಡಕೊಂಡ್ಲಿ ಗ್ರಾಮದ ನಿವಾಸಿ.
ತಾನು ಅಂಗವಿಕಲನಾದ್ರೂ ಸ್ವಾಭಿಮಾನದಿಂದ ಬದುಕಬೇಕೆಂಬ ಛಲ ಹೊಂದಿದ್ದು, ಸಣ್ಣದೊಂದು ಚಿಲ್ಲರೆ ಅಂಗಡಿ ವ್ಯವಸ್ಥೆ ಮಾಡಿಕೊಟ್ಟರೆ ಯಾರಿಗೂ ಹೊರೆಯಾಗದಂತೆ ಬದುಕುತ್ತೇನೆ ಎಂದು ನಂದೀಶ್ ಹೇಳುತ್ತಾರೆ. ಊಟ ತಿಂಡಿ ಸೇರಿದಂತೆ ದಿನನಿತ್ಯದ ಕೆಲಸಕ್ಕೆಲ್ಲಾ ಬೇರೆಯವರನ್ನು ಅವಲಂಬಿಸಬೇಕು. 10ನೇ ತರಗತಿವರೆಗೆ ಓದಿರುವ ನಂದೀಶ್ ಗೆ ತಾನು ಮನೆಯವರಿಗೆ ಹೊರೆಯಾಗಬಾರದು, ಇನ್ನಾದರೂ ಸ್ವಂತ ದುಡಿಮೆ ಮಾಡಿ ಬದುಕಬೇಕು ಎಂಬ ಛಲ ಇದೆ. ಹಾಗಾಗಿ ಒಂದು ಪೆಟ್ಟಿಗೆ ಅಂಗಡಿ ಇಟ್ಟು, ಚಿಲ್ಲರೆ ಸಾಮಾನು ಕಲ್ಪಿಸಿ ಕೊಟ್ಟರೆ ಅದನ್ನು ಮಾರಿ ಸ್ವಾಭಿಮಾನದ ಜೀವನ ನಡೆಸಬಲ್ಲೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ.
Advertisement
Advertisement
ಸರ್ಕಾರದ ಸೌಲಭ್ಯಗಳಿಂದ ವಂಚಿತ: ನಂದೀಶ್ ತಾಯಿ ಸುವರ್ಣಮ್ಮ ಅವರು ದುಡಿದು ಸಂಸಾರ ಸಾಗಿಸಬೇಕಾಗಿದೆ. ತಂದೆ ನಾರಾಣಪ್ಪರಿಗೆ ಅನಾರೋಗ್ಯದಿಂದ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ತಾಯಿಯ ಕಷ್ಟ ಕಂಡು ಕಣ್ಣೀರಿಡುವ ನಂದೀಶ್ ತಾನೂ ದುಡಿಮೆ ಮಾಡಬೇಕು. ತಾಯಿಗಾಗುವ ಕಷ್ಟವನ್ನು ಆದಷ್ಟು ಕಡಿಮೆ ಮಾಡಬೇಕು ಎಂಬ ಹಂಬಲವನ್ನು ಹೊಂದಿದ್ದಾರೆ. ಹಾಗಾಗಿ ಪೆಟ್ಟಿಗೆ ಅಂಗಡಿ ಇಟ್ಟು ಚಿಲ್ಲರೆ ವ್ಯಾಪಾರ ಮಾಡುವ ಮನಸ್ಸು ಮಾಡಿದ್ದಾರೆ. ಅಂಗಲವಿಕಲ ಸಹಾಯಧನ ಬಿಟ್ಟರೆ ಇನ್ಯಾವುದೇ ಸರ್ಕಾರದ ಸೌಲಭ್ಯ ನಂದೀಶ್ ಗೆ ಸಿಕ್ಕಿಲ್ಲ. ಹಲವು ಬಾರಿ ಅಧಿಕಾರಿಗಳಿಗೆ ಅರ್ಜಿ ನೀಡಿದ್ರು ಕನಿಷ್ಠ ಪಕ್ಷ ಅಂಗವಿಕಲ ವಾಹನವನ್ನೂ ನೀಡಿಲ್ಲ. ಅಂಗವಿಕಲರ ಆಧಾರ್ ಯೋಜನೆಯ ನೆರವೂ ಸಿಕ್ಕಿಲ್ಲ.
Advertisement
ನಂದೀಶ್ ಮನೆ ಪಕ್ಕದಲ್ಲಿ ಖಾಲಿ ಜಾಗವಿದೆ. ಆ ಜಾಗದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಟ್ಟರೆ ಅಲ್ಲೆ ವ್ಯಾಪಾರ ಮಾಡಿ, ಒಂದಿಷ್ಟು ಸಂಪಾದಿಸಿ ತಾಯಿ ಮೇಲಿರುವ ಭಾರವನ್ನು ತಪ್ಪಿಸುತ್ತೇನೆ ಅಂತಾರೆ ನಂದೀಶ್.
Advertisement