ಮಲ್ಲೇಶ್ವರಂ ಗೋಡೆಗಳ ಮೇಲೆ ದೃಶ್ಯಕಾವ್ಯ ಅರಳಿಸಿದ್ದ ಅದ್ಭುತ ಕಲಾವಿದ ಈಗ ಹಾಸಿಗೆ ಹಿಡಿದು ಕೇಳ್ತಿದ್ದಾರೆ ಸಹಾಯ

Public TV
3 Min Read
ctd belaku 3

ಚಿತ್ರದುರ್ಗ: ಈ ವ್ಯಕ್ತಿ ಕೇವಲ ಚಿತ್ರಕಲಾವಿದರಲ್ಲ, ಬಹುಮುಖ ಪ್ರತಿಭೆ. ಯಾವುದೇ ಶಾಲಾ- ಕಾಲೇಜಿಗೆ ಹೋಗಿ ಕಲಿತವರಲ್ಲ. ಪ್ರವೃತ್ತಿಯಲ್ಲಿ ವನ್ಯಜೀವಿ ಛಾಯಾಗ್ರಾಹಕರು. ಸಾಹಸಿಗ, ಚಾರಣಿಗ, ಪರಿಸರ ಪ್ರೇಮಿ ಕೂಡ. ಇಂತಹ ಬಹುಮುಖ ಪ್ರತಿಭೆ ಈಗ ಹಾಸಿಗೆ ಹಿಡಿದಿದ್ದಾರೆ. ಜೀವನ ಬಂಡಿ ಸಾಗಿಸಲು ಆಗದೆ ಸಹಾಯದ ಹಸ್ತ ಚಾಚುತ್ತಿದ್ದಾರೆ. ಬೆಳಕು ಕಾರ್ಯಕ್ರಮದ ಮೂಲಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಕಂಪ್ಯೂಟರ್ ಪರದೆಯ ಮೇಲೆ ಮೂಡುತ್ತಿದ್ದ ಛಾಯಾಚಿತ್ರಗಳನ್ನ ತೋರಿಸುತ್ತಾ ಪ್ರವಾಸಿಗರ ಕಣ್ಣಿಗೆ ಕಾಣದೇ ಅವಿತಿಟ್ಟುಕೊಂಡಿರುವ ಚಿತ್ರದುರ್ಗದ ಅಪರೂಪದ ತಾಣಗಳನ್ನ ಕಲಾವಿದ ನಾಗರಾಜ್ ಅಲಿಯಾಸ್ ನಾಗು ಪರಿಚಯಿಸುತ್ತಿದ್ದರು. ಅವರ ಪರಿಚಯದ ಮಾತುಗಳಲ್ಲಿ ಪರಿಸರ ಪ್ರೀತಿಯಿತ್ತು. ನಿರೂಪಣೆಯಲ್ಲಿ ದುರ್ಗದ ಇತಿಹಾಸ ತಿಳಿಸುವ ಹಂಬಲವಿತ್ತು.

ctd belaku 4

`ನಾಗು ಆರ್ಟ್ಸ್’ನಿಂದಲೇ 25ರ ಹರೆಯದ ನಾಗರಾಜ್ ದುರ್ಗದಲ್ಲಿ ಫೇಮಸ್ಸು. 10ನೇ ತರಗತಿಗೇ ಓದಿಗೆ ತಿಲಾಂಜಲಿ ಇಟ್ಟು, ಕೈಯಲ್ಲಿ ಕುಂಚ ಹಿಡಿದು ತೋಚಿದ್ದನ್ನು ಗೀಚುತ್ತಾ, ಗೀಚಿದ್ದನ್ನೇ ಚಿತ್ರವಾಗಿಸುತ್ತಾ, ಚಿತ್ರಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡರು. ಮನೆಯಲ್ಲಿ ಪ್ರೋತ್ಸಾಹದ ಕೊರತೆ ಇದ್ದಾಗಲೂ, ಕಟ್ಟಿಗೆ ಮಾರಿ ಬಂದ ಹಣದಲ್ಲಿ ಬಣ್ಣಗಳನ್ನು ಖರೀದಿಸುತ್ತಾ ಕಲೆಯನ್ನು ಅಭ್ಯಾಸ ಮಾಡಿದರು. ಈಗ ಅವರ ಪೇಂಟಿಂಗ್ ಕಾರ್ಯವ್ಯಾಪ್ತಿ ಜಿಲ್ಲೆಯ ರಾಜಬೀದಿಗಳ ಗೋಡೆಯಿಂದ ರಾಜಧಾನಿ ಬೆಂಗಳೂರಿನ ಗೋಡೆಗಳವರೆಗೂ ವಿಸ್ತಾರಗೊಂಡಿದೆ.

ಚಿತ್ರದುರ್ಗದ ರಾಜಬೀದಿಗಳ ಗೋಡೆಗಳ ಮೇಲೆ ದುರ್ಗದ ಇತಿಹಾಸ, ಕೋಟೆ, ಕೊತ್ತಲು, ಬುರುಜು ಬತೇರಿಗಳು, ದೇವಾಲಯಗಳು, ಜೋಗಿಮಟ್ಟಿ ಅರಣ್ಯದ ಕಾಡು ಪ್ರಾಣಿಗಳ ಚಿತ್ರಗಳು ಮೆರವಣಿಗೆ ಹೊರಟಿದ್ದರೆ, ಬೆಂಗಳೂರಿನ ಮಲ್ಲೇಶ್ವರದ ಅಂಡರ್ ಪಾಸ್, ಕ್ರೀಡಾಂಗಣದ ಗೋಡೆಗಳ ಮೇಲೆ ಕ್ರಿಕೆಟ್ ತಾರೆಗಳು ದೃಶ್ಯಕಾವ್ಯಗಳಾಗಿದ್ದಾರೆ. ಇಂತಹ ವ್ಯಕ್ತಿ ಈಗ ಹೃದಯದ ಬೈಪಾಸ್ ಸರ್ಜಿರಿಯಿಂದ ಹಾಸಿಗೆ ಹಿಡಿದಿದ್ದಾರೆ. ಜೀವನ ಸಂಕಷ್ಟಲ್ಲಿದೆ. ಯಾರಾದ್ರೂ ಸಹಾಯ ಮಾಡ್ತಾರಾ ಅಂತಾ ಎದುರು ನೋಡ್ತಾ ಇದ್ದಾರೆ. ಅದೂ ತಾನು ರಚಿಸಿರುವ ಚಿತ್ರಗಳನ್ನ ಕೊಂಡುಕೊಳ್ಳುವ ಮೂಲಕ ಆರ್ಥಿಕವಾಗಿ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ctd belaku 1

ಚಿತ್ರಕಲೆ ಎಂಬುದು ಗುರುವಿನಿಂದ ಕಲಿತಿದ್ದಲ್ಲ. ಏಕಲವ್ಯ `ದ್ರೋಣಾಚಾರ್ಯ’ರ ಪ್ರತಿಮೆಯನ್ನಿಟ್ಟು ಬಿಲ್ವಿದ್ಯೆ ಕಲಿತಂತೆ, ದುರ್ಗದ ಏಳುಸುತ್ತಿನ ಕೋಟೆ, ಜೋಗಿಮಟ್ಟಿ ಅರಣ್ಯದ ಪಕ್ಷಿ ಪ್ರಾಣಿಗಳನ್ನು ನೋಡುತ್ತಾ, ಖ್ಯಾತ ಚಿತ್ರಕಾರರು ಬಿಡಿಸಿದ ವರ್ಣರಂಜಿತ ಚಿತ್ರಗಳನ್ನು ಆಸ್ವಾದಿಸುತ್ತ ತನ್ನ ಮನದಾಳದ ಭಾವನೆಗಳಿಗೆ `ಬಣ್ಣದ ಅಂಗಿ’ ತೊಡಿಸುತ್ತಲೇ ನಾಗರಾಜ್ ಚಿತ್ರಕಲಾವಿದರಾದರು. ಇವ್ರು ಬಿಡಿಸಿರುವ ಅನೇಕ ಚಿತ್ರಗಳು ಈಗ ಸಾಗರದಾಚೆಗಿನ ದೇಶವನ್ನು ತಲುಪಿವೆ. `ತ್ರಿಡಿ’ ಎಫೆಕ್ಟ್ ನಲ್ಲಿ ಕಾಣುವ ಕ್ಯಾನ್ವಾಸ್ ಮೇಲಿನ ಗಣಪತಿ, ನಾಟ್ಯರಾಣಿ, ದಾನಮ್ಮದೇವಿ, ತಾಯಿ-ಮಗು ವರ್ಣಚಿತ್ರಗಳಿಗೆ `ಐಕಾನ್’ಗಳಂತಾಗಿಬಿಟ್ಟಿವೆ.

ನಾಗರಾಜ್ ಅವರಿಗೆ ಪತ್ನಿ ಪ್ರಿಯದರ್ಶಿನಿ ಸಾಥ್ ನೀಡಿದ್ದಾರೆ. ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳದಿದ್ದರೂ ಪುತ್ರಿಯರಾದ ವೀಣಾ ಮತ್ತು ಅಶ್ವಿನಿ ಅಪ್ಪನ ಶ್ರಮವನ್ನ ಗೌರವಿಸುತ್ತಾರೆ. ಇಂಥ ಏಳು-ಬೀಳುಗಳ ಕಲಾ ಪಯಣದಲ್ಲಿ ಮೈಲಿಗಲ್ಲುಗಳಂತೆ ಆರು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ಮೈಸೂರಿನ ದಸರಾ ಮಹೋತ್ಸವ, ಬಾಗಲಕೋಟೆಯ ದೃಷ್ಟಿ ಕಲಾವೇದಿಕೆ, ಯುವಜನ ಸೇವಾ ಕ್ರೀಡಾ ಇಲಾಖೆ ಪ್ರಶಸ್ತಿಗಳು ದೊರೆತಿವೆ.

ctd belaku 2

2007ರಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಮಂಡಳಿ ನಾಗರಾಜ್ ಸಮಗ್ರ ಸೇವೆಯನ್ನು ಗೌರವಿಸಿ ಸನ್ಮಾನಿಸಿವೆ. ಇಂತಹ ಕಲಾವಿದ ಹಾಸಿಗೆ ಹಿಡಿದಿರೋದು ಕುಟುಂಬಕ್ಕೆ ಜಂಖಾಬಲವೇ ಕುಸಿದಂತಾಗಿದೆ. ಯಾರಾದ್ರೂ ತಮ್ಮ ಸಹಾಯಕ್ಕೆ ಬಂದು ನೋವಿನಲ್ಲಿರುವ ಕುಟುಂಬಕ್ಕೆ ಸಹಾಯ ಮಾಡಿ ಅಂತಾ ಪತ್ನಿ ಪ್ರಿಯದರ್ಶಿನಿ ಕೂಡ ಮನವಿ ಮಾಡಿದ್ದಾರೆ.

ಸುಮಾರು ಆರು ತಿಂಗಳಿನಿಂದ ಬೆಂಗಳೂರಿಗೆ ಆಸ್ಪತ್ರೆಗೆ ಓಡಾಡಬೇಕಾಗಿದೆ. ಇದ್ರಿಂದ ಇದ್ದ ಹಣವೂ ಖಾಲಿಯಾಗಿದೆ. ದೊಡ್ಡಮಟ್ಟದಲ್ಲಿ ಚಿತ್ರಕಲಾ ಪ್ರದರ್ಶನದ ಯೋಜನೆ ಮಾಡಿಕೊಂಡಿದ್ದ ನಾಗರಾಜ್ ಅನಾರೋಗ್ಯ ಆಸೆಗೆ ತಣ್ಣೀರು ಎರಚಿದೆ. ಸಹಾಯ ಮಾಡುವವರು ಅನುಕಂಪದಿಂದ ಮಾಡದೆ ನನ್ನ ಕಲೆಗೆ ಬೆಲೆ ಕೊಟ್ಟು ಆ ಮೂಲಕ ಆರ್ಥಿಕವಾಗಿ ಸಹಾಯ ಮಾಡಲಿ ಅನ್ನೋ ಹಂಬಲ ಇದೆ.

 

Share This Article
Leave a Comment

Leave a Reply

Your email address will not be published. Required fields are marked *