ಮೈಸೂರು: ಗೋಬಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ತನ್ನ ಓದಿಗೂ ಹಣ ಸಂಪಾದಿಸಿಕೊಂಡು ತನ್ನನ್ನು ನಂಬಿರುವ ಅಜ್ಜಿಯನ್ನು ಸಾಕುತ್ತಿರುವ ಬಾಲಕನ ಸ್ಟೋರಿ ಇದು. ಓದಿನಲ್ಲಿ ತುಂಬಾ ಮುಂದಿರುವ ಬಾಲಕ ಈಗ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ. ಈ ಹಂತದಲ್ಲಿ ಆತನಿಗೆ ಓದಿಗಾಗಿ ಸಹಾಯ ಹಸ್ತ ಬೇಕಿದೆ.
ಮೈಸೂರಿನ ಹೆಬ್ಬಾಳ ಒಂದನೇ ಹಂತದಲ್ಲಿನ ಭೈರವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಈಗ ಹತ್ತನೇ ತರಗತಿ ಓದುತ್ತಿರುವ ಮನೋಜ್‍ಗೆ ತಂದೆ, ತಾಯಿ ಇಲ್ಲ. ಬದುಕಿನ ಮುಸ್ಸಂಜೆಯಲ್ಲಿರುವ ಅಜ್ಜಿ ಮಾತ್ರ ಇದ್ದಾರೆ.
ಓದಿನಲ್ಲಿ ತುಂಬಾ ಪ್ರತಿಭಾವಂತನಾಗಿರೋ ಮನೋಜ್ ಕುಮಾರ್, ಇಂಗ್ಲೀಷ್ ಮೀಡಿಯಂನಲ್ಲಿ ಓದುತ್ತಿದ್ದು ಇಲ್ಲಿಯವರೆಗೆ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾನೆ. ಆದರೆ ಮನೆಯಲ್ಲಿನ ಬಡತನದ ಜೊತೆ ಓದುವುದು ಕಷ್ಟವಾಗಿದೆ. ಇಷ್ಟು ವರ್ಷ, ಬೆಳಗ್ಗೆ ಶಾಲೆ ಮುಗಿಸಿ ಸಂಜೆ ಗೋಬಿ ಅಂಗಡಿಯಲ್ಲಿ ಕೆಲಸ ಮಾಡಿ, ಮನೆ ನೋಡಿಕೊಂಡು ಓದಿಗೂ ಅನುಕೂಲ ಮಾಡಿಕೊಂಡಿದ್ದ. ಆದರೆ ಈ ವರ್ಷ ಓದುವುದು ಹೆಚ್ಚಾಗಿರುತ್ತೆ ಟ್ಯೂಷನ್ ಶುಲ್ಕ, ಪುಸ್ತಕ ಖರೀದಿಗೆ ಹೆಚ್ಚು ಹಣ ಬೇಕಿದೆ. ಆದರೆ ಆತನ ದುಡಿಮೆಯಲ್ಲಿ ಅದನ್ನೆಲ್ಲಾ ನಿಭಾಯಿಸಲಾಗದೆ ಕೈ ಚೆಲ್ಲಿ ಕುಳಿತಿದ್ದಾನೆ.
ಅಡ್ಮಿಷನ್ ಶುಲ್ಕ, ಟ್ಯೂಷನ್ ಶುಲ್ಕ, ಪಠ್ಯಪುಸ್ತಕ ಶುಲ್ಕ ಎಲ್ಲಾ ಸೇರಿ ಈ ವರ್ಷಕ್ಕೆ 20 ಸಾವಿರ ಅಗತ್ಯವಿದೆ. ಇಷ್ಟು ಹಣ ಸಿಕ್ಕರೆ ನೆಮ್ಮದಿಯಿಂದ ಈ ವರ್ಷ ಓದಿ ಉತ್ತಮ ಅಂಕ ಪಡೆಯುತ್ತೇನೆ ಅನ್ನೋದು ಮನೋಜ್ ಮನವಿ.