3 ವರ್ಷಗಳಿಂದ ಶೌಚಾಲಯದಲ್ಲಿ ವಾಸಿಸುತ್ತಿರೋ ಕುಟುಂಬಕ್ಕೆ ಬೇಕಿದೆ ಶಾಶ್ವತ ಸೂರಿನ ಆಸರೆ

Public TV
2 Min Read
CTD BELAKU 2

ಚಿತ್ರದುರ್ಗ: ಕಡು ಬಡವರು, ನಿರ್ಗತಿಕರು ಹಾಗೂ ಹಿಂದುಳಿದವರ ಅಭಿವೃದ್ದಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನ ಜಾರಿಗೆ ತರುತ್ತಿದೆ. ಅಲ್ಲದೇ ಕಾಡಲ್ಲಿ ಮತ್ತು ಹಾಡಿ, ತಾಂಡಗಳಲ್ಲಿ ವಾಸವಾಗಿರೋ ಕಡುಬಡವರ ಬಳಿಗೆ ಸರ್ಕಾರದ ಸಚಿವರು ತೆರಳಿ, ವಾಸ್ತವ್ಯ ಹೂಡಿ ಅವರಿಗೆ ಸವಲತ್ತುಗಳನ್ನು ಕಲ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಆದ್ರೆ ಸಮಾಜಕಲ್ಯಾಣ ಸಚಿವ ಆಂಜನೇಯರವರ ತವರು ಜಿಲ್ಲೆಯಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ಮೂರು ವರ್ಷಗಳಿಂದ ವಾಸವಾಗಿರೋದು ಮಾತ್ರ ಅದ್ಯಾಕೋ ಕಾಣ್ತಾ ಇಲ್ಲಾ.

ಹೌದು. ಚಿತ್ರದುರ್ಗದಲ್ಲೇ ಹುಟ್ಟಿ ಬೆಳೆದು ಸರ್ಕಾರದಿಂದ ನೀಡುವ ಆಧಾರ್ ಕಾರ್ಡ್, ಮತದಾನದ ಗುರುತಿನ ಚೀಟಿ ಹಾಗೂ ಆಹಾರ ಪಡಿತರ ಚೀಟಿಯನ್ನು ಪಡೆದುಕೊಂಡಿರೋ ಕುಟುಂಬ ಇದು. ಏನಿದ್ರೆ ಏನ್ ಭಾಗ್ಯ ಇವ್ರಿಗೆ ವಾಸಿಸಲು ಸ್ವಂತ ಮನೆಯೇ ಇಲ್ಲಾ. ನಗರದ ಕಾಮನಬಾವಿ ಬಡಾವಣೆಯ ಪಕ್ಕದಲ್ಲಿರೋ ಸಾರ್ವಜನಿಕ ಶೌಚಾಲಯವೊಂದರಲ್ಲೆ ಆಶ್ರಯ ಕಲ್ಪಿಸಿಕೊಂಡಿದ್ದಾರೆ.

CTD BELAKU 1

ಕುಟುಂಬದ ಹಿರಿ ತಲೆ ಮಂಜಮ್ಮನ ಕುಟುಂಬಕ್ಕೆ ಈಕೆಯ ಮಗಳಾದ ಅಂಬುಜ ಆಸರೆಯಾಗಿದ್ದೂ, ಗಾರೆ ಕೆಲಸದಿಂದ ತನ್ನ ಮಕ್ಕಳಾದ ರಂಗಸ್ವಾಮಿ, ಆಂಜನೇಯ ಹಾಗೂ ಮಂಜಮ್ಮನವರನ್ನ ಹಾರೈಕೆ ಮಾಡುತಿದ್ದಾರೆ. ಸುಮಾರು ಮೂರು ವರ್ಷಗಳಿಂದ ಬದುಕಿದ್ದೂ ಸತ್ತವರಂತೆ ಅಮಾನವೀಯವಾಗಿ ದುರ್ವಾಸನೆಯ ಶೌಚಾಲಯದಲ್ಲೇ ಜೀವನ ದೂಡ್ತಾ ಇದ್ದಾರೆ. ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದೆ ಈ ಕುಟುಂಬ. ಮನೆಯ ಬಾಡಿಗೆ ಕಟ್ಟಲಾಗದೇ ಬೇಸತ್ತ ಈ ಕುಟುಂಬವು ಸಾರ್ವಜನಿಕ ಶೌಚಾಲಯದಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದೂ, ಹಂದಿಗೂಡಾಗಿದ್ದ ಶೌಚಾಲಯವನ್ನ ಸ್ವಚ್ಛಗೊಳಿಸಿಕೊಂಡು ಅದ್ರಲ್ಲೇ ವಾಸಿವಾಗಿದ್ದಾರೆ.

CTD BELAKU 3

ಇಂತಹ ಕಷ್ಟದಲ್ಲೂ ಇರುವ ಇಬ್ಬರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕೆಂಬ ಕನಸು ಕಂಡಿರೋ ಮಂಜಮ್ಮನ ಮಗಳಾದ ಅಂಬುಜ, ಹಲವು ಬಾರಿ ಆಶ್ರಯ ಯೋಜನೆಯಡಿ ನಗರಸಭೆಯಿಂದ ನೀಡುವ ಮನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮನೆಗಾಗಿ ಜಿಲ್ಲೆಯ ಜನಪ್ರತಿನಿಧಿಗಳ ಮನೆ ಹಾಗೂ ನಗರಸಭೆ ಕಚೇರಿಯ ಮೆಟ್ಟಿಲು ಹತ್ತಿ ಇಳಿದು ಸುಸ್ತಾಗಿದ್ದಾರೆ. ಇದ್ರಿಂದ ಸಾವಿರಾರು ರೂಪಾಯಿ ನಷ್ಟವಾಗಿದೆ ಹೊರತು ಯಾವುದೇ ಪ್ರಯೋಜನವಾಗಿಲ್ಲ. ಈವರೆಗೆ ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ನಮಗೆ ಮನೆ ನೀಡಿಲ್ಲವೆಂದು ಆರೋಪಿಸಿರೋ ಅಂಬುಜ, ನಾವು ಕೂಡ ಎಲ್ಲರಂತೆ ನೆಮ್ಮದಿಯಿಂದ ಬದುಕಬೇಕೆಂಬ ಆಸೆ ಇದೆ. ಹೀಗಾಗಿ ನಮಗೂ ಒಂದು ಶಾಶ್ವತ ಸೂರನ್ನು ಕಲ್ಪಿಸಿಕೊಡಿ ಆಗ ನಾವು ಈ ಶೌಚಾಲಯದಿಂದ ಮುಕ್ತಿ ಪಡೆಯುತ್ತೇವೆ ಅಂತ ಸರ್ಕಾರವನ್ನ ಎದುರು ನೋಡ್ತಾರೆ.

CTD BELAKU 4

ಹಿಂದುಳಿದ ಸಮುದಾಯಗಳ ಅಭಿವೃದ್ದಿಗೆ ಸರಕಾರ ತರುತ್ತಿರೋ ಯೋಜನೆಗಳು ಉಳ್ಳವರ ಪಾಲಾಗ್ತಿವೆ. ಆದ್ರೆ ಕಡುಬಡವರು ಅವಕಾಶದಿಂದ ವಂಚಿತರಾಗಿ ವಾಸಿಸಲು ನೆಲೆಯಿಲ್ಲದೇ ಶೌಚಾಲಯಗಳಲ್ಲಿ ವಾಸಿಸುತಿದ್ದಾರೆಂಬುದಕ್ಕೆ ಈ ಪ್ರಕರಣ ತಾಜಾ ಉದಾಹರಣೆಯಾಗಿದೆ. ಇನ್ನಾದ್ರೂ ಸರ್ಕಾರ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ನಿಡುವ ಮೂಲಕ ಇಂತಹ ನಿರ್ಗತಿಕರನ್ನ ಗುರುತಿಸಿ ಸೂರಿನ ಭಾಗ್ಯ ಕಲ್ಪಿಸಿಕೊಂಡುವಂತಾಗಲಿ.

 

Share This Article
Leave a Comment

Leave a Reply

Your email address will not be published. Required fields are marked *