Tuesday, 17th July 2018

Recent News

ಎಳನೀರು, ಗುಲಾಬಿ ಗಿಡಗಳನ್ನು ಮಾರಾಟ ಮಾಡಿ ಜೀವನ ನಡೆಸ್ತಿರೋ ಮಹಿಳೆಗೆ ಬೇಕಿದೆ ಸೂರು

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಎಳನೀರು ಹಾಗೂ ಗುಲಾಬಿ ಹೂಗಳ ಸಸಿಗಳನ್ನು ಮಾರಾಟ ಮಾಡುತ್ತಿರುವ ಈಕೆಯ ಹೆಸರು ಮಹಾದೇವಿ.

ಮಳೆಗಾಲ ಬಂತೆಂದರೆ ಫಾರ್ಮ್ ನಲ್ಲಿ ಬೆಳೆದ ಬಗೆಬಗೆಯ ಹೂವಿನ ಗಿಡಗಳನ್ನು ಮಹಾದೇವಿಯವರು ದೂರದ ಊರುಗಳಾದ ಮಹಾರಾಷ್ಟ್ರದ ಕೋಲ್ಹಾಪುರ, ನಿಪ್ಪಾಣಿ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಹೀಗೆ ಅನೇಕ ಕಡೆ ತಮ್ಮದೇ ಟಾಟಾ ಏಸ್ ವಾಹನದ ಮೂಲಕ ಸಾಗಿಸಿ ಮಾರಾಟ ಮಾಡುತ್ತಾರೆ. ಬೇಸಿಗೆಯಲ್ಲಿ ಎಳೆ ನೀರು ಮಾರಾಟ ಮಾಡುತ್ತಾರೆ. ನಿತ್ಯ ಡ್ರೈವ್ ಮಾಡಿಕೊಂಡು ಪಕ್ಕದ ಊರುಗಳಿಂದ ಎಳನೀರು ತಂದು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸದೃಢವಾಗಿರದ ಕಾರಣ ರಸ್ತೆ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡಲು ಒಂದು ಸೂರು ನಿರ್ಮಿಸಿಕೊಡಿ ಎನ್ನುತ್ತಿದ್ದಾರೆ ಮಹಾದೇವಿ.

ಮಹಾದೇವಿಯವರು ತಮ್ಮ ಜೀವನದಲ್ಲಾದ ಕೆಡುಕುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿತ್ಯ ಕೂಲಿ ಕಾರ್ಮಿಕರ ಜೊತೆ ಕೆಲಸ ಮಾಡುತ್ತಾರೆ. ಜೊತೆಗೆ ಏಳನೀರು ಮಾರಿ ಬಂದ ದುಡ್ಡಲ್ಲಿ ಲೋನ್ ಮೂಲಕ ಒಂದು ವಾಹನ ಖರೀದಿಸಿ ನಿತ್ಯ ಕಾಯಕದಲ್ಲಿ ತೊಡಗಿದ್ದಾರೆ. ಇಬ್ಬರು ತಮ್ಮಂದಿರು ಮತ್ತು ಅಪ್ಪ-ಅಮ್ಮನನ್ನು ಸಾಕುವ ಹೊಣೆ ಹೊತ್ತಿರುವ ಮಹಾದೇವಿ ಟಾಟಾ ಏಸ್ ವಾಹನವನ್ನು ಲೀಲಾಜಾಲವಾಗಿ ಓಡಿಸುತ್ತಾರೆ. ಮದುವೆಯಾಗಿ ಕೆಲ ವರ್ಷಗಳ ನಂತರ ಗಂಡ ಬೇರೊಬ್ಬ ಹೆಂಗಸಿನ ಸಹವಾಸ ಮಾಡಿ ಮಹಾದೇವಿಯವರನ್ನ ಮನೆಯಿಂದ ಹೊರಹಾಕಿದ ನಂತರ ಮಹಾದೇವಿ ಧೃತಿಗೆಡದೆ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿರುವುದು ನಿಜಕ್ಕೂ ಮಾದರಿ ಅಂತಾರೆ ಸ್ಥಳೀಯರು.

ಹುಟ್ಟುತ್ತಲೇ ಗಂಡು ಹೆಣ್ಣೆಂಬ ಬೇಧ-ಭಾವ ಮಾಡಿ ಅದೆಷ್ಟೋ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವ ಜನರಿಗೆ ಮಹಾದೇವಿ ಗಂಡಿಗಿಂತ ನಾನು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಜೀವನ ಒಡ್ಡಿರುವ ಸವಾಲನ್ನು ದಿಟ್ಟತನದಿಂದ ಸ್ವೀಕರಿಸಿ ಮುನ್ನುಗ್ಗುತ್ತಿರುವ ಮಹಾದೇವಿಗೆ ಸಹಾಯ ಬೇಕಿದೆ.

Leave a Reply

Your email address will not be published. Required fields are marked *