ರಾಯಚೂರು: ಬೆಳಗಿನ ಜಾವ, ಸಂಜೆ ವೇಳೆ ಮನೆಯಲ್ಲೇ ಕುಳಿತು ಕಾಲ ಕಳೆಯೋರಿಗಿಂತ ಹಾಗೇ ಒಂದು ವಾಕ್ ಹೋಗಿ ಬರುವವರು ಸಾಮಾನ್ಯವಾಗಿ ಹೆಚ್ಚು ಲವಲವಿಕೆಯಿಂದ ಇರ್ತಾರೆ. ಆದ್ರೆ ರಾಯಚೂರಿನ ಈ ಪ್ರದೇಶದ ಜನರು ಹೊರಗಡೆ ಸುತ್ತಾಡೋಣ ಅಂದ್ರೆ ಎಲ್ಲಿಗೆ ಹೋಗೋದು ಅನ್ನೋ ಚಿಂತೆಯಲ್ಲಿದ್ದಾರೆ.
60 ರ ಆಸುಪಾಸಿನ ನಿವೃತ್ತಿ ವಯಸ್ಸಿನವರೇ ಹೆಚ್ಚಾಗಿರುವ ಇಲ್ಲಿ ಉದ್ಯಾನವನಕ್ಕೆ ಜಾಗ ಇದ್ದರೂ ಇಲ್ಲದಂತಾಗಿದೆ. ಯುವಕರಿಗೆ ಇಲ್ಲದ ಜೋಶ್ ಇಲ್ಲಿನ ವೃದ್ಧರಲ್ಲಿದೆ. ಇವರಿಗೆ ಒಂದು ಸುಂದರ ಉದ್ಯಾನವನದ ಅವಶ್ಯಕತೆಯಿದೆ.
Advertisement
Advertisement
ಮಕ್ಕಳಿಗೆ ಆಟವಾಡಲು, ಯುವಕರಿಗೆ ಜಾಗಿಂಗ್ ಮಾಡಲು, ಮೆಲುನಡಿಗೆ ವೃದ್ಧರಿಗೆ, ಹಾಗೇ ಕೆಲಹೊತ್ತು ಪ್ರಶಾಂತವಾಗಿ ಕುಳಿತು ಎದ್ದು ಹೋಗಬೇಕು ಎನ್ನುವವರಿಗೆ ಒಂದು ಉದ್ಯಾನವನ ಬೇಕೇ ಬೇಕು. ಅದರಲ್ಲೂ ಬಿಸಿಲನಾಡು ರಾಯಚೂರಿನಲ್ಲಿ ಎಷ್ಟು ಉದ್ಯಾನವನಗಳಿದ್ದರೂ ಸಾಲದು. ನಗರದ ಲಾಲ್ ಬಹದ್ದೂರ್ ಶಾಸ್ತ್ರಿನಗರದಲ್ಲಿ ಉದ್ಯಾನವನದ ಜಾಗವಿದ್ದರೂ ಪ್ರಯೋಜನವಿಲ್ಲದಂತಾಗಿದೆ.
Advertisement
21 ಸಾವಿರದ 600 ಚದರಡಿಯ ಜಾಗಕ್ಕೆ ಭದ್ರವಾದ ಕಾಪೌಂಡ್ ಇದ್ದರೂ ಭದ್ರತೆಯಿಲ್ಲ. ಬೋರ್‍ವೆಲ್ ಇದ್ರೂ ನೀರಿನ ಸಮರ್ಪಕ ಬಳಕೆಯಿಕ್ಕ. ಜಾಲಿ ಗಿಡ ಬಿಟ್ಟರೆ ಯಾವ ಸಸಿಯೂ ನೆಟ್ಟಿಲ್ಲ, ಗೇಟ್ ಮುರಿದು ಮೂಲೆಯಲ್ಲಿಡಲಾಗಿದೆ. ಉದ್ಯಾನವನ ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾತ್ರವಲ್ಲದೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಹೀಗಾಗಿ ಇಲ್ಲಿನ ನಿವಾಸಿಗಳು ಬೇಸತ್ತು ಹೋಗಿದ್ದಾರೆ. ಕಾಂಪೌಂಡ್ ಮಾತ್ರ ಕಟ್ಟಿ ಸುಮ್ಮನಾಗಿರುವ ನಗರಸಭೆ ಇತ್ತ ತಲೆ ಕೂಡ ಹಾಕುತ್ತಿಲ್ಲ. ಹೀಗಾಗಿ ಇಲ್ಲಿನ ಹಿರಿಯ ನಾಗರಿಕರು ಉದ್ಯಾನವನಕ್ಕಾಗಿ ಧ್ವನಿ ಎತ್ತಿದ್ದಾರೆ. ಆದ್ರೆ ಕೇಳಿಸಿಕೊಳ್ಳುವವರು ಯಾರು ಇಲ್ಲದಂತಾಗಿದೆ.
Advertisement
ಉದ್ಯಾನವನದ ಜಾಗದ ಪಕ್ಕದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿರುವುದರಿಂದ ಸುಂದರ ಪರಿಸರ ನಿರ್ಮಾಣವಾದ್ರೆ ಮಕ್ಕಳ ಕಲಿಕೆ ಮೇಲೂ ಒಳ್ಳೆಯ ಪರಿಣಾಮ ಬೀರಲಿದೆ. ಆದ್ರೆ ಕೊಳಚೆ ಪ್ರದೇಶದಿಂದ ಸುತ್ತುವರೆದಿರುವ ಎಲ್.ಬಿ.ಎಸ್ ನಗರದ ಉದ್ಯಾನವನದ ಜಾಗ ಬೇರೆ ಇನ್ಯಾವುದೋ ಕಾರಣಗಳಿಗೆ ಬಳಕೆಯಾಗುತ್ತಿದೆ. ಈಗಾಗಲೇ ತಪ್ಪನ್ನರಿತಿರುವ ನಗರಸಭೆ ಅಭಿವೃದ್ದಿಗೆ ಮುಂದಾಗುವ ಭರವಸೆ ನೀಡಿದೆ. ಅಲ್ಲದೆ ಕ್ಯಾಷೋಟೆಕ್ ಸಂಸ್ಥೆ ಉದ್ಯಾನವನಕ್ಕೆ ಅಗತ್ಯವಿರುವ ಬೆಂಚ್, ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಿಕೊಡಲು ಮುಂದೆ ಬಂದಿದೆ.
ಒಟ್ಟಿನಲ್ಲಿ ಉದ್ಯಾನವನಕ್ಕಾಗಿ ಜಾಗಗಳನ್ನ ಮೀಸಲಿಟ್ಟರೂ ಅಭಿವೃದ್ಧಿಪಡಿಸುವವರು ಇಲ್ಲದಂತಾಗಿದೆ. ಕೇಳುವವರು ಯಾರೂ ಇಲ್ಲದೆ ಹೋದ್ರೆ ಉದ್ಯಾನವನದ ಜಾಗಗಳೇ ಮಾಯವಾಗುವ ಪರಸ್ಥಿತಿಯಿದೆ. ಇಂಥಹ ಸ್ಥಿತಿ ಎಲ್.ಬಿ.ಎಸ್ ನಗರದ ಉದ್ಯಾನವನಕ್ಕೆ ಬರಬಾರದು. ನಿವಾಸಿಗಳಿಗೆ ಸುಂದರ ಪರಿಸರ ನಿರ್ಮಾಣವಾಗಬೇಕು ಅನ್ನೋದಷ್ಟೇ ನಮ್ಮ ಆಶಯ.