ಗದಗ: ಮೊದಲು ಚೆನ್ನಾಗಿಯೇ ಇದ್ದ ಯುವಕ, ನಾಲ್ಕು ವರ್ಷದ ಹಿಂದೆ ಬಿದ್ದ ನೆಪದಿಂದ ಮೂಲೆ ಗುಂಪಾಗಿಬಿಟ್ಟಿದ್ದ. 23 ವರ್ಷದ ಯುವಕ ನರರೋಗ, ಸಂದುನೋವಿನಿಂದ ಬಳಲುತ್ತಿದ್ದು, ಕಡು ಬಡತನ ಆತನ ಬದುಕನ್ನೆ ಕಸಿದುಕೊಳ್ಳುತ್ತಿತ್ತು. ಬಡತನದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬರದೂರ ಗ್ರಾಮದ ನಿವಾಸಿ ಮೌನೇಶ ದೇವೆಂದ್ರಪ್ಪ ಕಮ್ಮಾರ ನಾಲ್ಕು ವರ್ಷಗಳ ಹಿಂದೆ ಆಟವಾಡುವ ವೇಳೆ ಬಿದ್ದು ಕಾಲುಗಳಲ್ಲಿ ಶಕ್ತಿ ಹೀನಗೊಂಡಿತ್ತು. ಎದ್ದೇಳಲು, ಓಡಾಡಲು ಆಗದೇ ನರರೋಗ, ಸಂದು ನೋವಿನಿಂದ ತೀವ್ರವಾಗಿ ಬಳಲುತ್ತಿದ್ದರು. ಕುಟುಂಬ ಬಡತನ ಇರುವುದರಿಂದ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗಿರಲಿಲ್ಲ.
ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಬಂದ ಮೌನೇಶನ ಕುಟುಂಬಸ್ಥರು ವೈದ್ಯಕೀಯ ನೆರವು ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ರು. ಗದಗ ಜಿಲ್ಲಾ ವೈದ್ಯಾಧಿಕಾರಿ ಪಾಂಡುರಂಗ ಕಬಾಡಿ ಅವರು ಮೌನೇಶನ ಚಿಕಿತ್ಸೆಗೆ ಕೊಡಿಸುವುದಾಗಿ ಬೆಳಕು ಕಾರ್ಯಕ್ರಮದಲ್ಲಿ ಭರವಸೆ ನೀಡಿದರು. ಜಿಲ್ಲಾ ವೈದ್ಯಾಧಿಕಾರಿಗಳು ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ. ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ನಿತ್ಯ ಚಿಕಿತ್ಸೆ ಪಡೆಯುತ್ತಿರುವ ಮೌನೇಶ ಬೆಳಕು ಕಾರ್ಯಕ್ರಮ ನನ್ನ ಬಾಳಿಗೆ ಬೆಳಕಾಗುತ್ತಿರುವುದು ಖುಷಿ ತಂದಿದೆ ಅಂತ ಹೇಳುತ್ತಾರೆ.
ಆಸ್ಪತ್ರೆಯಲ್ಲಿ ನಿತ್ಯ ಇಂಜಕ್ಷನ್, ಮಾತ್ರೆ, ಮಸಾಜ್, ಕಾಲುಗಳಿಗೆ ವ್ಯಾಯಾಮ ಮಾಡಿಸಲಾಗುತ್ತಿದೆ. ಅಲ್ಲದೇ ಎಚ್.ಎಲ್.ಎ ಬಿ-27 (ಅಂಕಲಾಜಿಂಗ್ ಸ್ಪಂಡಲೆಜಿಸ್) ಎಂಬ ಕಾಯಿಲೆ ಇರಬಹುದು ಎಂದು ಊಹಿಸಿ ಪುಣೆ ಲ್ಯಾಬಿಗೆ ರಕ್ತ ತಪಾಸಣೆಗೆ ಸಹ ಕಳುಹಿಸಿದ್ದಾರೆ. ಸಂದು ನೋವಿಗೆ ಚಿಕಿತ್ಸೆ ಮುಂದುವರೆದಿದ್ದು ಈಗ ಮೌನೇಶ, ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.
ನನ್ನ ಮಗ ಗುಣಮುಖವಾಗಲು, ಒಳ್ಳೆಯ ಚಿಕಿತ್ಸೆ ಸಿಗಲು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಕಾರಣ. ಒಟ್ನಲ್ಲಿ ತನ್ನಷ್ಟಕ್ಕೆ ತಾನು ನಡೆದಾಡಲು ಬಂದ್ರೆ ಅಷ್ಟೇ ಸಾಕು ಅಂತಿದ್ದಾರೆ ಮೌನೇಶನ ತಾಯಿ ಸರೋಜಾ ಹೇಳುತ್ತಾರೆ. ಮೌನೇಶನ ಕಾಯಿಲೆ ಗುಣಮುಖವಾಗಿ ಎಲ್ಲರಂತೆ ಎದ್ದು ನಿಂತು ಓಡಾಡಿ ತನ್ನ ಕಾಲ ಮೇಲೆ ನಿಂತು ಜೀವನ ಕಟ್ಟಿಕೊಳ್ಳಲಿ ಎಂಬುದು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಆಶಯವಾಗಿದೆ.