ರಾಯಚೂರು: ನಿತ್ಯ ರಾತ್ರಿವೇಳೆ ಪರದಾಡುತ್ತಿದ್ದ ಜನ ಈಗ ನೆಮ್ಮದಿಯಿಂದ ನಿದ್ದೆಮಾಡುತ್ತಿದ್ದು, ವಿದ್ಯಾರ್ಥಿಗಳ ಓದಿಗೂ ಈ ಹೊಸ ಬೆಳಕು ಹೊಸ ಹುಮ್ಮಸ್ಸನ್ನು ತಂದಿದೆ. ಹೌದು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ಮಾತು ಕೊಟ್ಟಂತೆ ರಾಯಚೂರಿನ ಈ ಗ್ರಾಮದಲ್ಲಿ ಬೆಳಕು ಮೂಡಿಸಿದ್ದೇವೆ. ವಿದ್ಯುತ್ ಸಂಪರ್ಕವೇ ಇಲ್ಲದ ಗ್ರಾಮಕ್ಕೆ ಈಗ ಸೋಲಾರ್ ಬೆಳಕನ್ನು ನೀಡಲಾಗಿದೆ.
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮಂಗಮ್ಮನ ಹಟ್ಟಿ ಗ್ರಾಮದಲ್ಲಿ ಕಣ್ಣು ಹಾಯಿಸಿದಂತೆ ಬೀದಿಯಲ್ಲಿ ಸರ್ಕಾರಿ ಶಾಲೆ, 50ಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿದೆ. ಅದರಲ್ಲಿ 250ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಸ್ವಾತಂತ್ರ ಬಂದು 70 ವರ್ಷಗಳು ಕಳೆದರೂ ಮನೆಯಲ್ಲಿ ವಿದ್ಯುತ್ ಅಂದರೆ ಏನು ಎಂಬುವುದನ್ನು ತಿಳಿಯದೇ ಕತ್ತಲಲ್ಲಿ ಬದುಕುತ್ತಿದ್ದರು. ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿದ್ದರೂ ಮಕ್ಕಳು ಓದಲು ದೀಪದ ಬೆಳಕೆ ಗತಿಯಾಗಿತ್ತು. ರಾತ್ರಿ ವೇಳೆ ಹಾವು, ಚೇಳು ಕಾಟ ವಿಪರೀತವಾಗಿದ್ದು ಇಲ್ಲಿನ ಜನ ನಿತ್ಯ ಭಯದಲ್ಲೇ ಬದುಕುತ್ತಿದ್ದರು.
Advertisement
Advertisement
ಮಂಗಮ್ಮನ ಹಟ್ಟಿ ಗ್ರಾಮಸ್ಥರು ಬೆಳಕನ್ನು ಅರಸಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು. ಬಳಿಕ ಸೆಲ್ಕೋ ಸೋಲಾರ್ ಕಂಪನಿ ಮೂಲಕ ಪ್ರತಿಯೊಂದು ಮನೆಗೂ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಿ, ಮನೆ ಮನೆಗೂ ಬೆಳಕನ್ನು ನೀಡಲಾಗಿದೆ. ಕತ್ತಲಿನಲ್ಲಿದ್ದ ಜನರು ಬೆಳಕನ್ನು ನೋಡಿ ಬೆರಗಾಗಿದ್ದಾರೆ. ಮಂಗಮ್ಮನಹಟ್ಟಿ ಗ್ರಾಮದಲ್ಲಿ ಸುಮಾರು 50 ಮನೆಗಳಿದ್ದು ಈ ಎರಡು ಗ್ರಾಮಗಳಿಗೂ ಬೆಳಕು ನೀಡಲು ಸೆಲ್ಕೋ ಸೋಲಾರ್ ಕಂಪನಿ ಸಾಥ್ ನೀಡಿತು. ಕಿಸಾನ್ ಭಾರತಿ ಟ್ರಸ್ಟ್ ಗ್ರಾಮಸ್ಥರಿಗೆ ಕೇವಲ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಆಧಾರದ ಮೇಲೆ ಪ್ರತಿಯೊಬ್ಬರಿಗೆ 4 ಸಾವಿರ ರೂಪಾಯಿ ಸಾಲವನ್ನು ನೀಡಿದೆ. ಉಳಿದ ಖರ್ಚನ್ನು ಪಬ್ಲಿಕ್ ಟಿವಿ ಹಾಗೂ ಸೆಲ್ಕೋಸೋಲಾರ್ ಕಂಪೆನಿ ಭರಿಸಿದೆ.
Advertisement
ಮಂಗಮ್ಮನಹಟ್ಟಿ ಪಕ್ಕದ ಕಂಟೇರಹಟ್ಟಿ ಗ್ರಾಮಕ್ಕೂ ಬೆಳಕು ನೀಡಲು ಮುಂದಾದ ವೇಳೆ ಸರ್ಕಾರ ಎಚ್ಚೆತ್ತು ವಿದ್ಯುತ್ ಸಂಪರ್ಕ ಕಾರ್ಯ ಕಲ್ಪಿಸುವ ಕಾರ್ಯವನ್ನು ಆರಂಭಿಸಿದೆ. ಇಷ್ಟುದಿನ ಸುಮ್ಮನಿದ್ದ ಸರ್ಕಾರ ಸದ್ಯ ಎಚ್ಚೆತ್ತಿದ್ದು ಸಮಾಧಾನ ತಂದಿದೆ. ಪ್ರತಿ ದಿನ ಕತ್ತಲಿನಲ್ಲೇ ಕಾಲ ಕಳೆಯುತ್ತಿದ್ದ ಮಂಗಮ್ಮನ ಹಟ್ಟಿ ಗ್ರಾಮದ ಜನ ಈಗ ನೆಮ್ಮದಿಯ ಬೆಳಕು ಕಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv