ಮಂಗಳೂರು: ದೇಶದ ಪ್ರತಿಯೊಬ್ಬ ಪ್ರಜೆಯೂ ಆಧಾರ್ ಕಾರ್ಡ್ ಹೊಂದಲೇ ಬೇಕು ಅನ್ನೋದು ಕೇಂದ್ರ ಸರ್ಕಾರದ ಆದೇಶ. ಆದರೆ ಅದೆಷ್ಟೋ ಮಂದಿ ನಾನಾ ಕಾರಣಗಳಿಂದ ಆಧಾರ್ ಕಾರ್ಡ್ ಪಡೆಯಲಾಗದೆ ಈ ದೇಶದ ಪ್ರಜೆಯೇ ಅಲ್ಲದಂತಾಗಿದ್ದಾರೆ.
ಮಂಗಳೂರಿನಲ್ಲೂ ಇಂತಹದೊಂದು ಕರುಣಾಜನಕ ಪ್ರಕರಣದಲ್ಲಿ ಆಧಾರ್ ಕಾರ್ಡ್ ಇಲ್ಲದ ಅಂಗವಿಕಲ ಮಹಿಳೆಯೋರ್ವರಿಗೆ ಬೆಳಕು ಕಾರ್ಯಕ್ರಮದ ಮೂಲಕ ಕ್ಷಣ ಮಾತ್ರದಲ್ಲಿ ಆಧಾರ್ ಕಾರ್ಡ್ ದೊರೆತಿದೆ. ಇದು ಬೆಳಕು ಕಾರ್ಯಕ್ರಮದ ಇಂಪ್ಯಾಕ್ಟ್.
Advertisement
ಕಳೆದ ವಾರದ ಬೆಳಕು ಕಾರ್ಯಕ್ರಮದಲ್ಲಿ ಮಂಗಳೂರಿನ ಕರುಣಾಜನಕ ಕಥೆಯನ್ನು ನಾವು ನಿಮ್ಗೆ ತೋರಿಸಿದ್ದೀವಿ. ಮಂಗಳೂರಿನ ಮಣ್ಣಗುಡ್ಡೆಯಲ್ಲಿ ವಾಸವಾಗಿರುವ ತಾಯಿ ಮಗಳ ಕಥೆ ಅದು. 85 ವರ್ಷದ ಚಂಚಲಾಕ್ಷಿ ಎಂಬ ತಾಯಿ ಆಕೆಯ 58 ವರ್ಷದ ಮಗಳನ್ನು ಪ್ರತಿ ದಿನ ಮನೆಯಲ್ಲಿ ಅತ್ತಿಂದಿತ್ತ ಎಳೆದಾಡಿಕೊಂಡೇ ಹೋಗುತ್ತಿದ್ದಾರೆ.
Advertisement
ಚಂಚಲಾಕ್ಷಿಯವರ ಮಗಳು ಮಾಲಿನಿ 6 ತಿಂಗಳ ಮಗುವಾಗಿದ್ದಾಗ ಪಿಡ್ಸ್ ಕಾಯಿಲೆಗೆಂದು ವೈದ್ಯರ ಬಳಿಗೆ ಹೋಗಿದ್ದಾಗ ಮಗುವಿನ ಬೆನ್ನು ಮೂಳೆಯ ನೀರು ತೆಗೆದಿದ್ದರಂತೆ. ಅಂದಿನಿಂದ ಇಂದಿನವರೆಗೆ ಅಂದರೆ 58 ವರ್ಷಗಳ ಕಾಲ ಆ ಮಗು ಎದ್ದು ನಿಲ್ಲಲೇ ಇಲ್ಲ. ಹೀಗಾಗಿ ಇಳಿ ವಯಸ್ಸಿನ ತಾಯಿ ಮನೆಯೊಳಗೆ ಎಳೆದಾಡಿಕೊಂಡೇ ಹೋಗುತ್ತಿದ್ದರು. ಮಾಲಿನಿಗೆ ಅಂಗವಿಕಲ ವೇತನ ಬರುತ್ತಿದ್ದರೂ ಇದೀಗ ಆಧಾರ ಕಾರ್ಡ್ ಕಡ್ಡಾಯವಾಗಿದ್ದರಿಂದ ಅದಕ್ಕೂ ಕೊಕ್ಕೆ ಬಿದ್ದಿತ್ತು. ಎದ್ದು ಆಚೀಚೆ ಹೋಗಲು ಅಸಾಧ್ಯವಾಗಿದ್ದ ಮಾಲಿನಿಗೆ ಆಧಾರ ಕಾರ್ಡ್ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ.
Advertisement
ಹೀಗಾಗಿ ಬೆಳಕು ತಂಡ ಈಕೆಯ ಕರುಣಾಜನಕ ಕಥೆಯ ಬಗ್ಗೆ ವರದಿ ಮಾಡಿದ್ದು ಜಿಲ್ಲಾಡಳಿತ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಜಗದೀಶ್‍ರಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ವಿನಂತಿಸಿಕೊಂಡಿದ್ದರು. ಅದರಂತೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಒಂದೇ ದಿನದಲ್ಲಿ ಮಾಲಿನಿಗೆ ಆಧಾರ್ ಕಾರ್ಡ್ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
Advertisement
ಜಿಲ್ಲಾಧಿಕಾರಿ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ತಕ್ಷಣ ಮಂಗಳೂರು ತಹಶೀಲ್ದಾರ್ ಅವರನ್ನು ಮನೆಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು. ಬಳಿಕ ಆಧಾರ್ ಕಾರ್ಡ್‍ನ ಮೊಬೈಲ್ ಸೇವೆ ಸ್ಥಗಿತಗೊಂಡಿದ್ದರೂ, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲೆಯ ಏಕೈಕ ಆಧಾರ್ ಕೇಂದ್ರದ ಎಲ್ಲಾ ಉಪಕರಣಗಳನ್ನು ಮಾಲಿನಿಯವರ ಮನೆಗೆ ಅಧಿಕಾರಿಗಳ ತಂಡ ತಂದು ಅವರ ಮನೆಯಲ್ಲೇ ಆಧಾರ್ ಕಾರ್ಡ್‍ನ ನೊಂದಾವಣಿಯನ್ನು ಮಾಡಿಕೊಂಡರು.
ಆಧಾರ್ ಕಾರ್ಡ್‍ನ ದಾಖಲಾತಿಯ ವಿವರವನ್ನು ತಕ್ಷಣದಲ್ಲೇ ನೀಡಿದ್ದು ಇನ್ನು 15 ದಿನದೊಳಗೆ ಮಾಲಿನಿಗೆ ಆಧಾರ್ ಕಾರ್ಡ್ ಲಭ್ಯವಾಗಲಿದೆ. ಮಾತ್ರವಲ್ಲ ಈ ಬಡ ಕುಟುಂಬಕ್ಕೆ ಇರುವ ಎಪಿಎಲ್ ಕಾರ್ಡ್‍ನ್ನು ರದ್ದುಗೊಳಿಸಿ ಬಿಪಿಎಲ್ ಕಾರ್ಡ್ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಮಾಲಿನಿಯ ಹೆಸರನ್ನೂ ಪಡಿತರ ಚೀಟಿಗೆ ಸೇರಿಸಲು ತಹಶೀಲ್ದಾರ್ ಇಲಾಖೆಗೆ ಸೂಚಿಸಿದ್ದಾರೆ. ಜೊತೆಗೆ ಮಾಲಿನಿಗೆ ಬೇಕಾದ ಆರೋಗ್ಯದ ಸೇವೆಯನ್ನೂ, ಸರ್ಕಾರದಿಂದ ಬರುವ ಅಂಗವಿಕಲ ವೇತನವನ್ನೂ ಸರಿಯಾಗಿ ಸಿಗುವಂತೆ ಆಯಾ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ನಡುವೆ ಅಂಗವಿಕಲರ ಪುನರ್ವಸತಿ ಕೇಂದ್ರದ ಅಧಿಕಾರಿಗಳೂ ಭೇಟಿ ನೀಡಿದ್ದು ಮಾಳಿನಿಗೆ ಸಿಗಬೇಕಾದ ಎಲ್ಲಾ ಸೌಲಭ್ಯವನ್ನೂ ನೀಡಲೂ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈಕೆಯ ಕರುಣಾಜನಕ ಕಥೆಯನ್ನು ತೆರೆದಿಟ್ಟ ಪಬ್ಲಿಕ್ ಟಿವಿಯ ಬೆಳಕು ತಂಡಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.
ಬೆಳಕು ತಂಡದ ಪ್ರಯತ್ನಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಕ್ಷಣಕ್ಕೆ ಸ್ಪಂದಿಸಿ ಮಾಲಿನಿಯ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಮಾಲಿನಿಗೂ ತಾನೊಬ್ಬ ಭಾರತದ ಪ್ರಜೆ ಅನ್ನೋ ದಕ್ಕೆ ಆಧಾರ ಸಿಕ್ಕಿದೆ. ನಮ್ಮ ಪ್ರಯತ್ನದಿಂದಾಗಿ ಇನ್ನಾದರೂ ಮಾಲಿನಿಯ ಜೀವನದಲ್ಲಿ ಹೊಸ “ಬೆಳಕು” ಮೂಡಲಿ ಅನ್ನೋದು ಪಬ್ಲಿಕ್ ಟಿವಿಯ ಆಶಯ.