ರಾಯಚೂರು: ಹೆತ್ತ ಮಕ್ಕಳು ಹತ್ತಿರವಿಲ್ಲ, ಅನಾರೋಗ್ಯ ಬಿದ್ದರೆ ಕೇಳೋರಿಲ್ಲಾ. ಸೂರು ಅಂತ ಇರುವ ಪುಟ್ಟ ಗುಡಿಸಲು ಹೆಸರಿಗೆ ಮಾತ್ರ ಆಸರೆಯಂತಿತ್ತು. ಮಳೆ, ಬೇಸಿಗೆ, ಚಳಿ ಎಲ್ಲಾ ಕಾಲದಲ್ಲೂ ತೊಂದರೆಯನ್ನೇ ಈ ವೃದ್ಧರು ಅನುಭವಿಸುತ್ತಿದ್ದರು. ಮುರುಕು ಮನೆಯಲ್ಲಿ ಕಷ್ಟಪಡುತ್ತಲೇ ಜೀವನ ಮುಗಿದು ಹೋಗುತ್ತೇ ಅಂತ ಕಷ್ಟದಲ್ಲಿ ಕಾಲಕಳೆಯುತ್ತಿದ್ದ ವೃದ್ಧರ ಬಾಳಿಗೆ ಇದೀಗ ಬೆಳಕು ಸಿಕ್ಕಿದೆ.
ಹೌದು. ಯಾರಿಗೂ ಕಮ್ಮಿಯಿಲ್ಲದಂತೆ ಬದುಕಬಲ್ಲೆವು ಅಂತಿದ್ದಾರೆ ರಾಯಚೂರಿನ ಅಲ್ಲಮಪ್ರಭು ಕಾಲೋನಿಯ ಸಂಗಮ್ಮ(85) ಹಾಗೂ ಬೂದೆಮ್ಮ(63) ವರ್ಷದ ಅಜ್ಜಿಯರು. ಎಲ್ಲರೂ ಇದ್ದೂ ಏನೂ ಇಲ್ಲದಂತೆ ಬದುಕುತ್ತಿದ್ದರು. ವಯೋಸಹಜ ಕಾಯಿಲೆ ಜೊತೆಗೆ ಇರಲು ಭದ್ರವಾದ ಸೂರಿಲ್ಲದೆ, ತುತ್ತು ಅನ್ನಕ್ಕೂ ಮತ್ತೊಬ್ಬರ ಮನೆಯಲ್ಲಿ ನಿತ್ಯ ಕೆಲಸ ಮಾಡಿ ಜೀವನ ಮಾಡುತ್ತಿದ್ದರು.
Advertisement
Advertisement
ಅಜ್ಜಿ ಸಂಗಮ್ಮಳಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳು. ಆದ್ರೆ ಮಗಳು ಬೂದೆಮ್ಮ ಮಾತ್ರ ತಾಯಿಯ ಬಗ್ಗೆ ಕಾಳಜಿ ತೋರಿಸಿ ಪುಟ್ಟ ಮುರುಕಲು ಮನೆಯಲ್ಲಿಟ್ಟುಕೊಂಡಿದ್ದರು. 63 ವರ್ಷದ ಬೂದೆಮ್ಮಳಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದಾನೆ. ಆದ್ರೆ ಮಗ ಇದ್ದರೂ ಇಲ್ಲದಂತಿದ್ದು, ಹೆಣ್ಣು ಮಕ್ಕಳು ತಮ್ಮ ಗಂಡನ ಮನೆ ಸೇರಿಕೊಂಡಿದ್ದಾರೆ. ಹೀಗಾಗಿ ಈ ಇಬ್ಬರು ಅಜ್ಜಿಯರನ್ನು ಕೇಳುವವರೇ ಇಲ್ಲವಾಗಿತ್ತು. ಮುರಕಲು ಮನೆಯಲ್ಲಿ ವಾಸವಾಗಿದ್ದ ಈ ಅಜ್ಜಿಯರು ಸೂರಿಗಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು. ಈಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಿಂದ ಸುಂದರ ಮನೆಯ ಒಡೆಯರಾಗಿದ್ದಾರೆ. ಈ ಮನೆಗೆ `ಬೆಳಕು’ ಎಂದು ಹೆಸರಿಟ್ಟು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ.
Advertisement
Advertisement
ವಸತಿಯೋಜನೆಯಡಿ ಸಿಕ್ಕ 13*18 ಚದರಡಿಯ ಜಾಗದಲ್ಲಿ ಈಗ ಸುಂದರವಾದ ಮನೆ ನಿರ್ಮಾಣವಾಗಿದೆ. ಹಾಲ್, ಪುಟ್ಟ ಬೆಡ್ ರೂಂ, ಅಡುಗೆ ಮನೆ, ಸ್ನಾನಗೃಹ ಶೌಚಾಲಯ, ದೇವರ ಪೂಜೆಗೂ ಮನೆಯಲ್ಲಿ ಜಾಗ ಮೀಸಲಿಡಲಾಗಿದೆ. ಫ್ಯಾನ್, ವಿದ್ಯುತ್ ಬೆಳಕಿನ ವ್ಯಸ್ಥೆಯನ್ನೂ ಮಾಡಿ ಭದ್ರವಾಗಿ ಮನೆಯನ್ನು ನಿರ್ಮಿಸಿ ಕೊಡಲಾಗಿದೆ.
ಬೆಳಕು ಕಾರ್ಯಕ್ರಮದಲ್ಲಿ ಮಾತು ಕೊಟ್ಟಂತೆ ಕ್ಯಾಷೊಟೆಕ್ ಸಂಸ್ಥೆಯ ಎಂಜಿನೀಯರ್‍ಗಳು ತಮ್ಮ ಸ್ವಂತ ದುಡ್ಡನ್ನ ಖರ್ಚುಮಾಡಿದ್ದಾರೆ. ಫಾರ್ಮಾ ಕಂಪನಿಯೊಂದರ ಕೆಲ ನೌಕರ ಸ್ನೇಹಿತರು ಮನೆ ನಿರ್ಮಾಣದ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ವಿಶೇಷ ಅಂದ್ರೆ ಸ್ವಾಭಿಮಾನಿ ಅಜ್ಜಿಯರಿಬ್ಬರು ಅಕ್ಕಪಕ್ಕದ ಮನೆಗಳಲ್ಲಿ ಜೋಳದ ರೊಟ್ಟಿ ಮಾಡಿ ಅದರಿಂದ ಬರುವ ಹಣದಲ್ಲಿ ಜೀವನ ಮಾಡುತ್ತಿದ್ದಾರೆ.
ಭದ್ರವಾದ ಸೂರಿನೊಂದಿಗೆ ನೆಮ್ಮದಿಯ ಜೀವನ ಮಾಡುತ್ತಾ ಸಂತಸ ಗೊಂಡಿದ್ದಾರೆ. ಅಜ್ಜಿಯರ ಸಂತೋಷ ಸದಾ ಹೀಗೆ ಇರಲಿ ಎಂಬುದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಆಶಯ.
https://www.youtube.com/watch?v=4NGmO5MjerQ