ಯಾದಗಿರಿ: ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ನಡೆಸಬೇಕಾದ ಅಜ್ಜಿ ಇದೀಗ ಅನಾಥರಾಗಿದ್ದಾರೆ. ಒಂದು ಕಡೆ ಅನಾಥ ಅನ್ನೋ ಕೊರಗು ಆದ್ರೆ, ಇನ್ನೊಂದು ಕಡೆ ಸೂರಿಲ್ಲದೇ ಪರಿತಪಿಸುವಂತಾಗಿದೆ. ಹೀಗಾಗಿ ನಿತ್ಯವೂ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅನಾಥ ಹಾಗೂ ಸೂರಿಲ್ಲದೇ ನಿತ್ಯವೂ ನರಕಯಾತನೆ ಅನುಭವಿಸುತ್ತಿರೋ ಈ ವೃದ್ಧೆ ಇದೀಗ ಜೀವನ ಸಾಗಿಸಲು ಅಜ್ಜಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.
ಹೌದು. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಮನಗನಾಳ ಗ್ರಾಮದ 80 ವರ್ಷದ ಹಣಮವ್ವ ಅವರು, ಈ ಮೊದಲು ಕೂಲಿ-ನಾಲಿ ಮಾಡಿಕೊಂಡು ಗಂಡನ ಜೊತೆ ಸುಖವಾಗಿ ಸಂಸಾರ ಸಾಗಿಸುತ್ತಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು. ವಿಧಿಯಾಟಕ್ಕೆ ಮೊದಲು ಗಂಡನನ್ನು ಕಳೆದುಕೊಂಡ ಕೊರಗಿನಲ್ಲಿದ್ದ ವೃದ್ಧೆ, ತನ್ನ ಎರಡೂ ಮಕ್ಕಳನ್ನು ಕೂಡ ಕಳೆದುಕೊಂಡು ಅನಾಥವಾಗಿ ಬದುಕುತ್ತಿದ್ದಾರೆ.
ಸದ್ಯ ಇವರು ಮನಗನಾಳ ಗ್ರಾಮದ ಪತ್ರಾಸ್ ಎಂಬವರ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಒಂದಿಷ್ಟು ಜಮೀನು ಹೊಂದಿದ್ದರೂ, ಇವರಿಗೆ ದುಡಿಯಲು ಸಾಧ್ಯವಾಗದೇ ಪಾಳು ಬಿದ್ದಿದೆ. ಈ ಅಜ್ಜಿಯ ಕಾಲು ಮುರಿದು ನಡೆಯಲು ಕಷ್ಟವಾದ್ರೂ, ದಿನ ನಿತ್ಯ ಭಿಕ್ಷೆಯನ್ನು ಬೇಡಿ ಜೀವನ ನಡೆಸುವಂತಹ ಪರಿಸ್ಥಿತಿ ಉದ್ಭವಾಗಿದೆ.
ಸರ್ಕಾರ ಬಡತನದಲ್ಲಿದ್ದ ಕುಟುಂಬಗಳಿಗೆ ಸಾಕಷ್ಟು ಯೋಜನೆಗಳು ಜಾರಿ ಮಾಡಿದೆ. ಆದ್ರೆ ನಿಜವಾದ ಬಡವರ ಬಗ್ಗೆ ಸರ್ಕಾರ ಗಮನ ತೋರುತ್ತಿಲ್ಲ. ಹಣಮವ್ವ ಅಜ್ಜಿ ದಶಕಗಳಿಂದ ಭಿಕ್ಷೆಯನ್ನು ಬೇಡಿ ಜೀವನ ನಡೆಸುತ್ತಿದ್ದಾರೆ. ಸರ್ಕಾರವೂ ಇವರ ನೆರವಿಗೆ ಬಂದಿಲ್ಲ. ಹೀಗಾಗಿ ಹಣಮವ್ವ ಅಜ್ಜಿ ತನ್ನ ಜೀವನದ ಬಂಡಿ ಸಾಗಿಸಲು ಕೈಗೆ ಮಕ್ಕಳು ಸಹ ಸಿಕ್ಕಿಲ್ಲ. ಸರ್ಕಾರವು ಬಡವರಿಗೆ ಆಶ್ರಯ ಯೋಜನೆ ಮನೆಗಳು, ವೃದ್ಧಾಪ್ಯ ವೇತನವು ಜಾರಿಗೆ ಮಾಡಿದೆ ನಿಜವಾದ ಫಲಾನುಭವಿ ಈ ಅಜ್ಜಿ ಎಂದು ಗುರುತಿಸಿಲ್ಲ. ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ನೋಡಿ, ತನ್ನ ನೆರವಿಗೆ ಸರ್ಕಾರ ಬರುತ್ತಿಲ್ಲ. ಹೀಗಾಗಿ ಪಬ್ಲಿಕ್ ಟಿವಿಯು ತನ್ನ ನೆರವಿಗೆ ನಿಲ್ಲುತ್ತೆ ಅಂತ ಆತ್ಮವಿಶ್ವಾಸದಿಂದ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಒಟ್ಟಾರೆ ನನ್ನವರು ಎನ್ನುವರು ಯಾರು ಇಲ್ಲದಕ್ಕೆ ಭಿಕ್ಷೆ ಬೇಡಿ ಜೀವನವನ್ನು ಸಾಗಿಸುತ್ತಿರುವ ಹಣಮವ್ವ ಅಜ್ಜಿಗೆ ಯಾರಾದರೂ ದಾನಿಗಳು ಸೂರಿನ ಸಹಾಯವನ್ನು ಮಾಡುವ ಮೂಲಕ ಬಾಳಿಗೆ ಬೆಳಕಾಗಬೇಕು ಎಂಬುದೇ ಅವರ ಆಶಯವಾಗಿದೆ. ಇನ್ನಾದ್ರೂ ವೃದ್ಧೆಯ ಕೂಗಿಗೆ ಸರ್ಕಾರ ಕಣ್ಣು ತೆರೆದು, ನೆರವಿಗೆ ನಿಲ್ಲುತ್ತಯೇ ಎಂಬುದನ್ನು ಕಾದು ನೋಡಬೇಕಾಗಿದೆ.
https://youtu.be/_0H7E57_iTc