ಬೆಳಗಾವಿ: ಎಷ್ಟೋ ಜನ ವಿಕಲಚೇತನರು ಜೀವನ ಸಾಗಿಸುವುದಕ್ಕೆ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಲ್ಲ ಎಂದು ಕೊರಗುತ್ತಾರೆ. ಅಂತಹವರಿಗೆ ಮಾದರಿಯಾಗುವಂತಹ ಯುವಕರೊಬ್ಬರಿದ್ದಾರೆ. ಇವರಿಗೆ ಕೈಗಳಿಲ್ಲ. ಬೆಳವಣಿಗೆಯಾಗದ ಕಾಲು, ಕಿತ್ತು ತಿನ್ನುವ ಬಡತನ. ಇಷ್ಟೆಲ್ಲ ಸಮಸ್ಯೆ ಇದ್ದರೂ ಈ ಯುವಕ ಯಾರ ಮೇಲೂ ಅವಲಂಬಿತವಾಗದೇ ಜೀವನ ಸಾಗಿಸುತ್ತಿದ್ದಾರೆ.
ಬೆಳವಣಿಗೆ ಆಗದ ಕಾಲಿನಿಂದಲೇ ಊಟ, ಕಾಲಿನಿಂದಲೇ ಬರೆಯುವುದು, ಬಾಯಿಯಿಂದ ಮೊಬೈಲ್ ಬಳಕೆ ಮಾಡುತ್ತಿರುವವರ ಹೆಸರು ಹನುಮಾನ್ ಬಬನ ಹೊನಕಾಂಡೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಅಜೂರು ಗ್ರಾಮದವರು. ಇವರು ಹುಟ್ಟಿನಿಂದಲೂ ವಿಕಲಾಂಗರಾಗಿದ್ದಾರೆ. ಬೇರೆ ಮಕ್ಕಳು ಶಾಲೆಗೆ ಹೋಗುವುದನ್ನೂ ನೋಡಿ ನಾನು ಹೀಗೆ ಮನೆಯಲ್ಲಿ ಕುಳಿತರೆ ಆಗಲ್ಲ ಎಂದು ಛಲ ತೊಟ್ಟು ಅಂಗವಿಕಲತೆಯನ್ನೇ ಮೆಟ್ಟಿ ನಿಂತಿದ್ದಾರೆ.
ಅಥಣಿಯ ಕಾಲೇಜಿನಲ್ಲಿ ಬಿ.ಕಾಂ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಹನುಮಾನ್ ಅವರು ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಬಿ.ಕಾಂ 5 ಸೆಮಿಸ್ಟರ್‍ಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದರೆ ನೀವು ನಂಬಲೇಬೇಕು. ಕಾಲೇಜಿನ ಎಲ್ಲ ಪರೀಕ್ಷೆಗಳನ್ನು ಇವರು ಬರೆಯುವುದು ಕಾಲಿನಲ್ಲಿಯೇ. ಅಲ್ಲದೆ ತಂದೆ ತಾಯಿಗೆ ಭಾರವಾಗದಂತೆ ಕಾಲುಗಳಿಂದಲೇ ಊಟ ಮಾಡಿ ತನ್ನ ದೈನಂದಿನ ಕಾರ್ಯಗಳನ್ನು ಮುಗಿಸುತ್ತಾರೆ. ಕೈ ಇಲ್ಲದಿದ್ದರೂ ಇವರು ಸಲೀಸಾಗಿ ಕಾಲು ಹಾಗೂ ಬಾಯಿಯಿಂದ ಮೋಬೈಲ್‍ಗಳನ್ನು ಆಪರೇಟ್ ಮಾಡುವುದೇ ವಿಶೇಷ.
ಇವರದ್ದು ತುಂಬು ಕುಟುಂಬ. ತಂದೆ ತಾಯಿಗೆ 7 ಜನ ಮಕ್ಕಳು. ಅದರಲ್ಲಿ ಇವರೇ ಹಿರಿಯ ಮಗ. ತುಂಡು ಹೊಲದಿಂದ ಬರುವ ಸಂಪಾದನೆಯಿಂದಲೇ ಜೀವನ ಸಾಗುತ್ತಿದೆ. ಮನೆಯಲ್ಲಿನ ಬಡತನವನ್ನು ನೋಡಿರುವ ಹನುಮಾನ್ ಅವರಿಗೆ ಸ್ವಂತ ಉದ್ಯೋಗ ಹೊಂದಬೇಕು, ತಂದೆ ತಾಯಿ ಹಾಗೂ ಕುಟುಂಬವನ್ನು ಸಾಕಬೇಕೆಂಬ ಬಯಕೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಆಸೆ. ಆದರೆ ಹಣ ಇಲ್ಲದ ಕಾರಣ ಉತ್ತಮ ಪುಸ್ತಕಗಳನ್ನು ಕೊಳ್ಳಲು ಆಗುತ್ತಿಲ್ಲ. ಇವರು ಅಂಗವಿಕಲ ಎನ್ನುವ ಭಾವನಯೇ ಮನೆಯಲ್ಲಿ ಇಲ್ಲ ಎಂದು ತಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವರ ಪರಿಸ್ಥಿತಿಯನ್ನು ನೋಡಿ ಸಾಕಷ್ಟು ಸಹಾಯ ಮಾಡಿರುವವರೊಬ್ಬರು ಹೆಚ್ಚಿನ ಪ್ರೋತ್ಸಾಹ ದೊರೆತರೆ ಹನುಮಾನ್ ಅಂದಿಕೊಂಡಿದ್ದನ್ನು ಸಾಧಿಸಬಲ್ಲ ಎನ್ನುತ್ತಾರೆ.
ಒಟ್ಟಿನಲ್ಲಿ ಅಪರೂಪದ ಇಂಥ ಪ್ರತಿಭೆಗಳಿಗೆ ಪ್ರೋತ್ಸಾಹದ ಅವಶ್ಯಕತೆಯಿದೆ. ಇಂಥ ಪ್ರತಿಭೆಗಳು ಬಡತನದ ಬೇಗೆಯಲ್ಲಿ ಬಾಡಿ ಹೋಗಲು ಬಿಡದೆ ಪ್ರೋತ್ಸಾಹ ಹಾಗೂ ಸಹಕಾರ ದೊರೆಯಲಿ ಎನ್ನುವುದೇ ನಮ್ಮ ಆಶಯ.