ಧಾರವಾಡ: ಬೆಳಕು ಕಾರ್ಯಕ್ರಮದಲ್ಲಿ ಈ ಬಾರಿ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ದಾನಿಗಳ ನೆರವಿನಿಂದ ಒಂದೇ ಬಾರಿಗೆ ನಾಲ್ಕಾರು ಮನೆಗಳಲ್ಲಿ ಬೆಳಕಿನ ಹಣತೆಯನ್ನ ಹಚ್ಚಬೇಕೆಂಬುದು ನಮ್ಮ ಇಚ್ಛೆ. ಕನಸು ಮೊಳಕೆಯೊಡೆದ ಕೂಡಲೇ ಕಣ್ಮುಂದೆ ಬಂದವರು ಆಟೋ ಚಾಲಕರು. ಪಬ್ಲಿಕ್ ಟಿವಿಗೂ ಆಟೋ ಚಾಲಕರಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಆ ಕಾರಣಕ್ಕಾಗಿಯೇ ನಮ್ಮ ಇಂದಿನ ವಿಭಿನ್ನ ಪ್ರಯತ್ನಕ್ಕೆ ಸಂಕೀರ್ಣ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಜಿಲ್ಲೆಯ 4 ಜನ ಆಟೋ ಚಾಲಕರನ್ನು ಆಯ್ಕೆ ಮಾಡಿಕೊಂಡಿದ್ದೇವೆ.
ಧಾರವಾಡದ ತೇಜಸ್ವಿನಗರದ ಪ್ರದೀಪ ಬ್ಯಾಹಟ್ಟಿ ಅವರು ವೃತ್ತಿಯಲ್ಲಿ ಡ್ರೈವರ್. ಇಬ್ಬರು ಮಕ್ಕಳು ಹಾಗೂ ತನ್ನ ತಾಯಿಯ ಜೊತೆ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ದೊಡ್ಡ ಮಗ ಬುದ್ಧಿಮಾಂದ್ಯ ಇನ್ನೊಬ್ಬ ಮಗ ಶಾಲೆಗೆ ಹೋಗುತ್ತಾನೆ. ತಾಯಿಗೆ ಕಿವಿ ಕೇಳಿಸಲ್ಲ. ಎರಡು ಮಕ್ಕಳನ್ನ ಬಿಟ್ಟು ತವರು ಸೇರಿರುವ ಪತ್ನಿ. ಡ್ರೈವಿಂಗ್ ಕೆಲಸಕ್ಕಾಗಿ ಬೇರೆ ಊರಿಗೆ ಹೋದ್ರೆ ಮಕ್ಕಳನ್ನ ನೋಡೋರಿಲ್ಲ. ತಾಯಿಗೆ ಆಸರೆಯಿಲ್ಲ. ಹೀಗಾಗಿ ಪ್ರದೀಪ ಅವರು ಇಂತಹ ವಿಧಿಯಾಟದ ನಡುವೆಯು ಸ್ವಾಭಿಮಾನದ ಬದುಕು ಅರಸಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
Advertisement
ಧಾರವಾಡದ ಸತ್ತೂರ ಆಶ್ರಯ ಬಡಾವಣೆಯಲ್ಲಿ ವಾಸವಿರೋ ಶಬ್ಬೀರ ಜಿನ್ನೂರ ಬಡತನವನ್ನೇ ಹಾಸಿಹೊದ್ದಿದ್ದಾರೆ. ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುತಿದ್ದ ಶಬ್ಬೀರ್‍ಗೆ ವಯಸ್ಸಿನಿಂದಾಗಿ ಈಗ ಭಾರದ ಕೆಲಸ ಮಾಡೋಕೆ ಆಗ್ತಿಲ್ಲ. ಆದ್ರೆ ದುಡಿಮೆಯಲ್ಲಿ ಜೀವನ ಕಂಡುಕೊಂಡಿರೋ ಇವರು ಸದ್ಯ ಜೀವನಕ್ಕಾಗಿ ಬೇರೆಯವರ ಆಟೋ ಓಡಿಸುತ್ತಾರೆ, ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳು ಸೇರಿ 7 ಜನ ಇದ್ದಾರೆ. ಇಬ್ಬರು ಮಕ್ಕಳು ಕೂಲಿ ಕೆಲಸಕ್ಕೆ ಹೋದ್ರು ಮನೆ ಮಂದಿಯ ಹೊಟ್ಟೆ ತುಂಬಲ್ಲ. ಹೀಗಾಗಿ ಶಬ್ಬೀರ್ ಅವರು ಮೊಮ್ಮಕ್ಕಳ ಶಿಕ್ಷಣಕ್ಕೆ ಆಸರೆ ಅರಸಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
Advertisement
ಇವರು ಧಾರವಾಡದ ನವಲೂರ ಗ್ರಾಮದ ಮಾಯಪ್ಪ ಮಾದರ. ಮೂರು ಜನ ಮಕ್ಕಳು. ನವಲೂರು ಆಶ್ರಯ ಬಡಾವಣೆಯಲ್ಲಿ ವಾಸ. ಶಾಲೆ ಕಲಿತಿದ್ದು 7ನೇ ತರಗತಿವರೆಗೆ ಮಾತ್ರ. ಆಟೋ ಓಡಿಸೊದು ಬಿಟ್ರೆ ಬೇರೆ ಕೆಲಸ ಗೊತ್ತಿಲ್ಲ. ದಿನವಿಡೀ ದುಡಿದರೂ ಸಿಗೋದು 400 ರೂ. ಅದರಲ್ಲಿ ಎರಡು ನೂರು ಆಟೋ ಮಾಲೀಕನಿಗೆ ಕೊಡಬೇಕು. ಉಳಿದ ಇನ್ನೂರು ರೂಪಾಯಿಗಳಲ್ಲಿ ಜೀವನ ಜೊತೆಗೆ ಮಕ್ಕಳ ಶಿಕ್ಷಣ. ಎಷ್ಟೇ ಬಡತನವಿರಲಿ ಮಕ್ಕಳನ್ನ ಚೆನ್ನಾಗಿ ಓದಿಸಬೇಕು ಎಂಬ ಹಂಬಲದಿಂದ ಬೆಳಕಿಗೆ ಬಂದಿದ್ದಾರೆ.
Advertisement
ಇನ್ನೂ ಧಾರವಾಡ ನಗರದ ಲಂಗೋಟಿ ಓಣಿಯ ಅಬ್ದುಲ್ ಅಜೀಝ ಎರಡು ಕೊಠಡಿಯ ಪುಟ್ಟಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ದಿನವೂ ಬಾಡಿಗೆ ಆಟೋ ಓಡಿಸಿದ್ರೆ ಮಾತ್ರ ಊಟ ಅನ್ನೋ ಪರಿಸ್ಥಿತಿ. ಜೊತೆಗೆ ಎರಡು ಮಕ್ಕಳು. ಅಬ್ದುಲ್ ಕೂಡ ಏನೇ ಕಷ್ಟ ಬರಲಿ ಮಕ್ಕಳ ಓದು ಮಾತ್ರ ನಿಲ್ಲಿಸಲ್ಲ ಅಂತಾರೆ. ಬಡತನದ ನಡುವೆಯೂ ಮಾದರಿಯಾಗಿರುವ ಇವರಿಗೆ ಸಹಾಯ ಬೇಕಿದೆ.
Advertisement