ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ನಿವಾಸಿ ಸಿದ್ದವ್ವ ಶೆರೆವಾಡರಿಗೆ ಹುಟ್ಟಿದಾಗಿನಿಂದ ಒಂದು ತೊಂದರೆ ಇದೆ. ಅದೇನಪ್ಪಾ ಅಂದ್ರೇ, ಅವರಿಗೆ ಬಾಯಿನೇ ಬಿಡಲು ಆಗಲ್ಲ. ಹೀಗಾಗಿ ಅವರು ಗಂಜಿ ಹಾಗೂ ಬಿಸ್ಕೆಟ್ ಬಿಟ್ಟು ಏನೂ ತಿನ್ನೊಲ್ಲ. ಸದ್ಯ ಅವರ ಬಾಯಿಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ರೆ, ತಿನ್ನಬಹುದು ಹಾಗೂ ಮಾತನಾಡೊದು ಸಾಧ್ಯ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಇದೀಗ ಈ ಯುವತಿಯ ಕುಟುಂಬ ಸಹಾಯಕ್ಕಾಗಿ ಪಬ್ಲಿಕ್ ಟಿವಿಯ ಮೊರೆ ಬಂದಿದೆ.
ಹೌದು. 17 ವರ್ಷ ವಯಸ್ಸಿನ ಸಿದ್ದವ್ವ ಶೆರೆವಾಡ ಬಾಯಿ ತೆರೆಯೋಕೆ ಆಗದೇ ಅದೇಷ್ಟು ಒದ್ದಾಟ ನಡೆಸಿದ್ದಾರೆ. ನೀರು ಕುಡಿಯಲು ಕೂಡಾ ಪರದಾಡುತ್ತಾರೆ. ಇನ್ನು ಹುಟ್ಟಿದಾಗಿನಿಂದ ಇವರು ಅನ್ನ, ರೊಟ್ಟಿಯಂಥ ಪದಾರ್ಥಗಳನ್ನು ತಿಂದಿಲ್ಲ. ಕೇವಲ ಗಂಜಿ, ಪುಡಿ ಮಾಡಿದ ಬಿಸ್ಕೆಟ್ ಮಾತ್ರ ತಿನ್ನೊಕೆ ಇವರಿಗೆ ಆಗತ್ತೆ. ಇದು ಇವರ ವೈಯಕ್ತಿಕ ಸಮಸ್ಯೆಯಾದ್ರೆ, ಇನ್ನೊಂದು ಕಡೆ ಇವರದ್ದು ಕಿತ್ತು ತಿನ್ನುವ ಬಡತನದ ಕುಟುಂಬ.
Advertisement
ಕಳೆದ 5 ವರ್ಷಗಳ ಹಿಂದೆ, ಯುವತಿಯ ತಂದೆ ಬಸಪ್ಪ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನು ಮನೆಯಲ್ಲಿ ತಾಯಿಯೊಬ್ಬಳೇ ಕೂಲಿ-ನಾಲಿ ಮಾಡಿ ಮೂರು ಮಕ್ಕಳನ್ನ ಸಾಕಬೇಕು. ಸಿದ್ದವ್ವಳ ತಂಗಿ ಶಾಲೆ ಕಲಿಯುತಿದ್ರೆ, ಅಣ್ಣ ಕಾಲೇಜಿಗೆ ಹೋಗ್ತಾರೆ. ಸಿದ್ದವ್ವ ಕೂಡಾ ಬಾಯಿ ತೆರೆಯೊಕೆ ಆಗದೇ ಇದ್ರೂ ಎಸ್‍ಎಸ್‍ಎಲ್‍ಸಿ ಮುಗಿಸಿದ್ದಾರೆ. ಆದರೆ ಇವರ ಬಾಯಿ ಶಸ್ತ್ರ ಚಿಕಿತ್ಸೆಗೆ ಹಣ ಇಲ್ಲದೇ 17 ವರ್ಷಗಳಿಂದ ಇದೇ ರೀತಿ ಬಿಸ್ಕೆಟ್ ಹಾಗೂ ಗಂಜಿಯ ಮೇಲೆ ಜೀವನ ಸಾಗಿಸುತ್ತಿದ್ದಾರೆ.
Advertisement
ಮಗಳ ಸ್ಥಿಯಿಂದ ಕಂಗೆಟ್ಟ ತಾಯಿ ಬಾಯಿ ಶಸ್ತ್ರ ಚಿಕಿತ್ಸೆ ಮಾಡಿಸಲೆಂದು ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದ್ರೆ ಮಗಳ ಚಿಕಿತ್ಸೆ ಸಾಧ್ಯವಿಲ್ಲ ಅಂತಾ ವೈದ್ಯರ ಉತ್ತರ. ಕೊನೆಗೆ ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಲ್ಲಿ ಬಾಯಿ ಶಸ್ತ್ರ ಚಿಕಿತ್ಸೆ ಬಗ್ಗೆ ಕೇಳಿದಾಗ ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡ್ತೀವಿ ಅಂತಾ ಹೇಳಿದಾಗ ತಾಯಿಗೆ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ. ಆದರೆ ಅದಕ್ಕೆ ಹಣ ಬೇಕಲ್ಲ.
Advertisement
ಹೇಗಾದ್ರು ಮಾಡಿ ಹಣದ ಸಹಾಯವಾದ್ರೆ ಮಗಳಿಗೆ ಹೊಸ ಜೀವನ ಸಿಗುತ್ತೆ ಅನ್ನೊದು ತಾಯಿಯ ಆಸೆ. ಸಿದ್ದವ್ವಳಿಗೆ ಕೂಡಾ ಮುಂದೆ ಕಲಿಬೇಕು ಅನ್ನೋ ಆಸೆಯೂ ಇದೆ. ಯುವಕರು ಬಾಯಿ ನೋಡಿ ಚುಡಾಯಿಸಿದ್ದಕ್ಕೆ ಬೇಸರಗೊಂಡು ಕಾಲೇಜ್ ಮೆಟ್ಟಿಲು ಕುಡಾ ಏರಲಿಲ್ಲ ಸಿದ್ದವ್ವ. ಸದ್ಯ 1 ಲಕ್ಷ ರೂಪಾಯಿ ಇದ್ರೆ ಇವಳು ಬಾಯಿ ಬಿಚ್ಚಿ ಮಾತನಾಡಬಹುದು ಹಾಗೂ ಬೇಕಾದ್ದನ್ನು ತಿನ್ನಬಹುದು. ಹೀಗಾಗಿ ಪಬ್ಲಿಕ್ ಟಿವಿ ಮೊರೆ ಬಂದಿರುವ ಈ ಕುಟುಂಬ, ಸಹಾಯಕ್ಕೆ ಮನವಿ ಮಾಡುತ್ತಿದೆ.