ಗದಗ: ಸಂಗೀತದ ಕಲೆ ಕಂಡಕಂಡವರ ಸ್ವತ್ತಲ್ಲ, ಅದು ಬಲ್ಲವರ ಮುತ್ತು. ಈ ಮಾತು ಆ ಬಾಲ ಕಲಾರಾಧಕನಿಗೆ ಹೇಳಿ ಮಾಡಿಸಿರುವಂತಹದ್ದು. ಸಂಗೀತದಲ್ಲಿ ಏನನ್ನಾದ್ರು ಸಾಧಿಸಬೇಕು ಅನ್ನೋದು ಆ ಬಾಲಕನ ಹಂಬಲ. ಆದ್ರೆ ಕಡು ಬಡತನ ಆ ಕಲಾಪ್ರತಿಭೆಯ ಕೈ ಕಟ್ಟಿಹಾಕಿದೆ. ಸಂಗೀತದಲ್ಲಿ ಸಾಧನೆ ಮಾಡಬೇಕೆನ್ನುವ ಛಲದಂಕಮಲ್ಲ ಇದೀಗ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಆಶ್ರಯಿಸಿ ಬಂದಿದ್ದಾನೆ.
ಜನರನ್ನ ಆಕರ್ಷಿಸೋ ಕಂಠಸಿರಿ, ಸಂಗೀತ ಪ್ರತಿಭೆಯ ಮೂಲಕ ಎಂಥವರನ್ನು ತನ್ನತ್ತ ಸೆಳೆದುಕೊಳ್ಳೋ ಬಾಲಕ. ಇದು ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ಬೆಳೆಯುತ್ತಿರೋ ಬಾಲ ಪ್ರತಿಭೆಯ ಕಲೆಯ ಅನಾವರಣ. ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಗ್ರಾಮದ 14 ವರ್ಷದ ಚನ್ನಪ್ಪ ಎಲಿ ಚೆಂದನೆಯ ಹಾಡುಗಾರ. ತನ್ನ ಕಂಠಸಿರಿಯಿಂದಲೇ ಎಂಥವರನ್ನು ಮೋಡಿ ಮಾಡೋ ಮೊಡಿಗಾರ ಬಾಲಕ. ತಂದೆ ಈರಪ್ಪ ಎಲಿ ತೀರಿಕೊಂಡಾಗಿನಿಂದ ತಾಯಿ ಆಶ್ರಯದಲ್ಲೆ ಬೆಳೆಯುತ್ತಿರೋ ಚನ್ನಪ್ಪ ಸದ್ಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದಾನೆ. ತಂದೆ ತೀರಿಕೊಂಡು ಎರಡು ವರ್ಷವಾಗಿದೆ. ತಂದೆ ತೀರಿಕೊಂಡಾಗಿನಿಂದ ಈ ಕುಟುಂಬಕ್ಕೆ ಬಡತನ ಕಿತ್ತು ತಿನ್ನುತ್ತಿದೆ. ತಾಯಿ ಕಸ್ತೂರೆವ್ವ ಹಾಗೂ ಮಗ ಚನ್ನಪ್ಪ ಇವರಿಬ್ಬರು ಬಡತನದ ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾರೆ.
Advertisement
ಚನ್ನಪ್ಪನಿಗೆ ಸಂಗೀತದಲ್ಲಿ ಸಾಧನೆ ಮಾಡಬೇಕೆಂಬ ಛಲವಿದೆ. ಆದ್ರೆ ಈ ಬಾಲ ಪ್ರತಿಭೆಗೆ ಕುಡುಬಡತನ ಕೈಕಟ್ಟಿ ಕುರಿಸಿದಂತಾಗಿದೆ. ಸಂಗೀತದಲ್ಲಿ ಶಾಸ್ತ್ರೀಯ ಹಾಗೂ ಹಿಂದೂಸ್ತಾನಿ ಸಂಗೀತ ಅಂದ್ರೆ ಈತನಿಗೆ ಅಚ್ಚು ಮೆಚ್ಚು. ಆದ್ರೆ ಸಂಗೀತ ತರಬೇತಿ ಹಾಗೂ ಕಲಾಪರಿಕರಗಳನ್ನು ಕೊಳ್ಳುವುದು ಈತನಿಗೆ ಕನಸಿನ ಮಾತಾಗಿದೆ. ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಸಂಗೀತ ಶಿಕ್ಷಣ ಹಾಗೂ ಪರಿಕರಗಳನ್ನ ನೀಡಿ ಬಾಳಿಗೆ ಬೆಳಕಾಗಬೇಕು ಎಂಬುದು ಇವರ ಆಸೆಯ.
Advertisement
ಸುತ್ತು ಹಳ್ಳಿಗಳಲ್ಲಿ ಯಾವಗಲ್ ಚೆನ್ನಪ್ಪನ ಹಾಡೆಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಭಜನೆ ಪದ, ಜನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಡೊಳ್ಳಿನ ಪದ, ಚಿತ್ರಗೀತೆಗಳನ್ನು ಹಾಡುವ ಮೂಲಕ ಜನರನ್ನು ಆಕರ್ಷಿಸಿದ್ದಾನೆ. ಚನ್ನಪ್ಪನಿಗೆ ಸಂಗೀತದಲ್ಲಿ ಮಹೊನ್ನತಿ ಹೊಂದುವ ಆಸೆ. ಆದ್ರೆ ಬಡತನ ಇರುವುದರಿಂದ ಏನನ್ನೂ ಮಾಡಲು ಸಾಧ್ಯವಾಗ್ತಿಲ್ಲ. ಬಾಲಕ ಹಾಡು ಹಾಡುತ್ತಿದ್ರೆ ಜನ ನಿಬ್ಬೆರಗಾಗಿ ಕೇಳ್ತಾರೆ. ಚನ್ನಪ್ಪನಲ್ಲಿ ಅದ್ಭುತ ಸಂಗೀತ ಕಲೆ, ಮಧುರ ಕಂಠವಿದೆ. ಆದ್ರೆ ಬಡತನ ಹಾಸು ಹೊಕ್ಕಾಗಿರುವುದರಿಂದ ಕಲೆಗೆ ಬೆಲೆ ಸಿಗದಂತಾಗಿದೆ. ಗಾನ ಕೋಗಿಲೆಗೆ ನೆಲೆ ಬೇಕಾಗಿದೆ. ಬಾಲ್ಯದಿಂದಲೇ ಆರಂಭವಾದ ಈತನ ಗಾನಯಾನ ಉತ್ತುಂಗಕ್ಕೇರಿದಾಗ ಮಾತ್ರ ಇಂತಹ ಗ್ರಾಮೀಣ ಪ್ರತಿಭೆಗೊಂದು ಮನ್ನಣೆ ದೊರೆಯಲು ಸಾಧ್ಯ. ಈತನಿಗೆ ಗುರಿ ಇದೆ, ಆದ್ರೆ ಗುರು ಇಲ್ಲ. ಬಡ ಸಂಗೀತ ಕಲಾವಿನ ಪಾಲಿಗೆ ಬೆಳಕು ಕಾರ್ಯಕ್ರಮ ಸಂಗೀತ ವಿದ್ಯಾಭ್ಯಾಸ ಕೊಡಿಸಿ ದಾರಿ ದೀಪವಾಗಬೇಕು ಅಂತಿದ್ದಾರೆ ಸ್ಥಳಿಯರು.
Advertisement
ಯಾರೋ ದಾರಿ ದೀಪಗಳು ಅವರವರ ಪಾಲಿಗೆ ಅಂತಾರೆ. ಇಂತಹ ಬಾಲ ಕಲಾಸಕ್ತನಿಗೆ ಪ್ರೋತ್ಸಾಹ ದೊರೆತದ್ದೇ ಆದ್ರೆ ಈ ನಾಡಿನಲ್ಲಿ ಚೆನ್ನಪ್ಪ ಸಂಗೀತ ಕ್ಷೇತ್ರದ ಚಿನ್ನಪ್ಪನಾಗೋದ್ರಲ್ಲಿ ಸಂದೇಹವಿಲ್ಲ.