ತುಮಕೂರು: ಸ್ವಾಭಿಮಾನದಿಂದ ಬದುಕಬೇಕು ಎಂದು ಹಂಬಲಿಸುವ ವಿಕಲಚೇತನ ವ್ಯಕ್ತಿಯೊಬ್ಬರು ತನಗೊಂದು ಅಂಗಡಿ ಮಳಿಗೆ ಕೊಡಿ ಎಂದು ಎಪಿಎಂಸಿ ಅಧಿಕಾರಿಗಳ ಬಳಿ ಅಂಗಲಾಚಿದ್ದಾರೆ. ಆದರೆ ಕರುಣೆ ಇಲ್ಲದ ಅಧಿಕಾರಿಗಳು ಸತತ ಮೂರು ವರ್ಷಗಳಿಂದ ಕಾಯಿಸಿ ಸಹಾಯವನ್ನು ಮಾಡದೇ ಬಾಳಿನಲ್ಲಿ ಕಣ್ಣೀರು ಹಾಕಿಸಿದ್ದಾರೆ.
ಹೌದು, ತುಮಕೂರಿನ ಗಂಗರಾಜು ಬದುಕು ಕಟ್ಟಿಕೊಳ್ಳಲು ಒಂದು ಅಂಗಡಿಗಾಗಿ ಅಲೆಯತ್ತಿದ್ದಾರೆ. ಗಂಗರಾಜು ಸ್ವಂತ ಉದ್ಯೋಗಕ್ಕಾಗಿ ತುಮಕೂರು ನಗರದಲ್ಲಿರುವ ಅಂತರಸನಹಳ್ಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ನಡೆಸಲು ಇಚ್ಚಿಸಿದ್ದರು. ಹಾಗಾಗಿ ಅಂಗವಿಕಲ ಮೀಸಲಾತಿ ಅಡಿಯಲ್ಲಿ ಅಂಗಡಿ ಮಳಿಗೆ ಮಂಜೂರು ಮಾಡಿ ಎಂದು ಕಳೆದ ಮೂರು ವರ್ಷಗಳಿಂದ ಮನವಿ ಮಾಡಿದ್ದಾರೆ. ಎಪಿಎಂಸಿ ಅಧಿಕಾರಿಗಳು, ಅಧ್ಯಕ್ಷರು ಸೇರಿದಂತೆ ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದರೂ ಸಹಾಯ ಮಾತ್ರ ಆಗಲೇ ಇಲ್ಲ.
Advertisement
Advertisement
ಗಂಗರಾಜು ಅವರಿಗೆ ಅಂಗಡಿ ಮಳಿಗೆ ನೀಡುವಂತೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಶಿಫಾರಸ್ಸು ಪತ್ರವನ್ನೂ ನೀಡಿದ್ದಾರೆ. ಇಷ್ಟಾದರೂ ಅವರಿಗೆ ಅಂಗಡಿ ಮಳಿಗೆ ಲಭಿಸಿಲ್ಲ. ಸುಮಾರು 10 ಕ್ಕೂ ಹೆಚ್ಚು ಮಳಿಗೆಗಳು ಮಾರುಕಟ್ಟೆಯಲ್ಲಿ ಖಾಲಿ ಇದೆ. ಮಾನವೀಯತೆ ದೃಷ್ಟಿಯಿಂದ ಒಂದಾದರೂ ಕೊಟ್ಟರೆ ತಾನು ಬದುಕು ಕಟ್ಟಿಕೊಳ್ಳುತ್ತೇನೆ ಎನ್ನುವುದು ಗಂಗರಾಜು ಅವರ ವಾದ.
Advertisement
ಪ್ರಸ್ತುತ ಗಂಗರಾಜು ಒಳ ಬಾಡಿಗೆ ಅಂಗಡಿ ಪಡೆದು ಹೆಚ್ಚಿನ ಬಾಡಿಗೆ ನೀಡಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಗಂಗರಾಜು ಅವರಿಗೆ ಆರ್ಥಿಕವಾಗಿ ಹೆಚ್ಚು ಹೊರೆಯಾಗುತ್ತಿದೆ. ಸರ್ಕಾರದಿಂದ ಅಂಗಡಿ ಮಳಿಗೆ ಮಂಜೂರಾದರೆ ವ್ಯಾಪಾರದಲ್ಲಿ ಲಾಭ ಉಳಿಸಿಕೊಳ್ಳಬಹುದು ಎಂಬುದು ಗಂಗರಾಜು ಅವರ ಇಂಗಿತ.
Advertisement
ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡರು ಹೇಳುವುದು ಬೇರೆ. ಕಳೆದ ಬಾರಿ ಲೈಸನ್ಸ್ ಇಲ್ಲದ ಕಾರಣ ಅಂಗಡಿ ಮಳಿಗೆ ನೀಡಲು ಸಾಧ್ಯವಾಗಿಲ್ಲ. ಈ ಬಾರಿ ಹರಾಜು ಕರೆದಿದ್ದರಿಂದ ಅಂಗವಿಕಲರಿಗೆ ಮೀಸಲಾತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಮಾನವೀಯತೆ ದೃಷ್ಟಿಯಿಂದ ಮಾರುಕಟ್ಟೆಯ ಆವರಣದಲ್ಲೇ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಹೂವಿನ ವ್ಯಾಪಾರ ನಡೆಸಲು ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.
https://www.youtube.com/watch?v=2ZcwlRPENE8