ಚಾಮರಾಜನಗರ: ದೇವರು ಕಷ್ಟ ನೀಡಿದವರಿಗೆ ಹೆಚ್ಚು ಕಷ್ಟ ಕೊಡುತ್ತಾನೆ ಎಂದು ಎಲ್ಲರೂ ಹೇಳುತ್ತಾರೆ. ಅದೇ ರೀತಿ ಇಲ್ಲೊಂದು ಅಂಗವಿಕಲ ಯುವತಿಯ ಸ್ಥಿತಿಯಾಗಿದೆ. ಅಪ್ಪ ಅಮ್ಮನನ್ನು ಕಳೆದುಕೊಂಡಿರುವ ಯುವತಿಯನ್ನು ನೋಡಿಕೊಳ್ಳುವವರೆ ದಿಕ್ಕಿಲ್ಲ. ಇದೀಗ ಬೆಳಕು ಕಾರ್ಯಕ್ರಮದಿಂದ ಸಹಾಯ ಮಾಡುವಂತೆ ಯುವತಿಯ ಸಂಬಂಧಿಕರು ಹಾಗೂ ಗ್ರಾಮಸ್ಥರು ಕೇಳಿದ್ದಾರೆ.
ಕಿತ್ತು ತಿನ್ನುವ ಬಡತನ, ಹಾಸಿಗಿಂದ ಮೇಲೆ ಏಳಲು ಆಗದೇ ಕಷ್ಟ ಪಡುತ್ತಿರುವ ಯುವತಿಯ ಹೆಸರು ಅಶ್ವಿನಿ (18). ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಚಿನ್ನಸ್ವಾಮಿ ನಾಗಮಣಿ ದಂಪತಿಯ ಪುತ್ರಿ. ಹುಟ್ಟಿನಿಂದಲೇ ಪೋಲಿಯೋಗೆ ತುತ್ತಾಗಿ ಅಂಗವಿಕಲೆಯಾದ ಅಶ್ವಿನಿಯನ್ನು ಅಪ್ಪ-ಅಮ್ಮ ಕೂಲಿ ನಾಲಿ ಮಾಡಿ ನೋಡಿಕೊಳ್ಳುತ್ತಿದ್ದರು. ಆದರೆ ತಂದೆ 5 ವರ್ಷಗಳ ಹಿಂದೆ, ತಾಯಿ ನಾಲ್ಕು ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ. ಸದ್ಯ ಅಶ್ವಿನಿ ಅಕ್ಷರಶಃ ಅನಾಥವಾಗಿದ್ದಾರೆ.
ಸ್ವತಃ ತನ್ನ ಕೆಲಸ ಮಾಡಿಕೊಳ್ಳಲು, ಓಡಾಡಲು ಕೈಕಾಲುಗಳಿಗೆ ಶಕ್ತಿ ಇಲ್ಲದೇ ಹಾಸಿಗೆಯ ಮೇಲೆ ಜೀವನ ಮಾಡುತ್ತಿರುವ ಅಶ್ವಿನಿ. ಸದ್ಯ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿರುವ ಚಿಕ್ಕಪ್ಪ ಸಿದ್ದೇಶ್ ಮತ್ತು ಚಿಕ್ಕಮ್ಮ ರಾಣಿಯ ಆಶ್ರಯದಲ್ಲಿದ್ದಾರೆ. ಪ್ರತಿನಿತ್ಯ ಕರ್ಮಗಳನ್ನು ಮಾಡಿಸಿ ಊಟ ತಿನ್ನಿಸಿ ಆರೈಕೆ ಮಾಡಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಕುಟುಂಬಸ್ಥರಿಗೆ ಈಗ ಅಶ್ವಿನಿ ಹೊರೆಯಾಗಿದ್ದಾರೆ.
ಬಡತನದಲ್ಲಿರುವ ಇವರ ಕುಟುಂಬ ಕೂಲಿ ಮಾಡದಿದ್ದರೆ ಒಂದು ಹೊತ್ತು ಊಟಕ್ಕೂ ಪರದಾಡುತ್ತಿದೆ. ನಾವುಗಳು ಕೆಲಸಕ್ಕೆ ಹೋದರೆ ಈಕೆಯನ್ನು ನೋಡಿಕೊಳ್ಳಲು ಆಗುತ್ತಿಲ್ಲ. ಈಕೆಯ ಆರೈಕೆಗೆ ಯಾರಾದರು ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
https://www.youtube.com/watch?v=_qPpJMhRFgc