ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ತನಗೂ ಸಚಿವ ಸ್ಥಾನ ನೀಡಿಲ್ಲ. ನಾವಿಬ್ಬರೂ ಸೇರಿಕೊಂಡು ನಮಗೆ ಸಚಿವ ಸ್ಥಾನ ತಪ್ಪಿಸಿದವರು ಯಾರು ಎಂದು ಹುಡುಕಾಟ ನಡೆಸಬೇಕಿದೆ ಎಂದು ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೋಳಿ ಹೇಳಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮಂತ್ರಿ ಸ್ಥಾನ ಕೈ ತಪ್ಪಿದ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ ಅವರು, ಅವರಿಗೂ ಸಚಿವ ಸ್ಥಾನ ತಪ್ಪಿದೆ. ನನಗೂ ಸಚಿವ ಸ್ಥಾನ ತಪ್ಪಿದೆ. ಹೀಗಿರುವಾಗ ಯಾರು ಯಾರಿಗೆ ಸಚಿವ ಸ್ಥಾನ ತಪ್ಪಿಸಿದರು ಎನ್ನುವ ಮಾತೇ ಉದ್ಭವಿಸುವುದಿಲ್ಲ. ಆದರೆ ಅವರು ಸಚಿವ ಸ್ಥಾನ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದಾರೆ, ನಾನು ಹಾಕಲಿಲ್ಲ ಅಷ್ಟೇ. ನಾವಿಬ್ಬರೂ ಸೇರಿಕೊಂಡು ನಮಗೆ ಸಚಿವ ಸ್ಥಾನ ತಪ್ಪಿಸಿದವರು ಯಾರು ಅಂತಾ ಹುಡುಕಾಡಬೇಕಿದೆ ಎಂದು ಹೇಳಿದ್ದಾರೆ.
Advertisement
Advertisement
ಸಚಿವ ಸ್ಥಾನದ ನೀಡುವಲ್ಲಿ ಪಕ್ಷದಲ್ಲಿ ಉಂಟಾಗಿರುವ ತಾರತಮ್ಯದ ಕುರಿತು ಈಗಾಗಲೇ ತಮ್ಮ ಅಸಮಾಧಾನವನ್ನು ನಾಯಕರಿಗೆ ತಿಳಿಸಿದ್ದು, ಸೋಮವಾರವೇ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಾನು ರಾಜೀನಾಮೆ ಸಲ್ಲಿಸಿದ್ದೇನೆ. ಮುಂದೆ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ, ಸೂಕ್ತ ಸ್ಥಾನಮಾನ ನೀಡಬೇಕು ಎಂದರು.
Advertisement
ಇದೇ ವೇಳೆ ಶುಕ್ರವಾರ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸಮ್ಮುಖದಲ್ಲಿ ಬೆಂಗಳೂರಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದ ಅವರು, ಸಭೆಯಲ್ಲಿ ಭಾಗವಹಿಸುತ್ತೇನೆ. ಆದರೆ ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದಲ್ಲಿದ್ದುಕೊಂಡೇ ಚರ್ಚೆ ಮಾಡುತ್ತೇವೆ. ನಮ್ಮ ಬೇಡಿಕೆಯನ್ನ ಕೇಳುತ್ತೇವೆ. ಸಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾವುದಿಲ್ಲ ಎಂದು ತಿಳಿಸಿದರು.
Advertisement
ಸದ್ಯ ಪಕ್ಷದಲ್ಲಿ ಉಂಟಾಗಿರುವ ಗೊಂದಲ ಹಾಗೂ ಸಮಸ್ಯೆಗಳು ಬಗೆಹರಿಯಲಾರದ ಸಮಸ್ಯೆಗಳಲ್ಲ. ಶೀಘ್ರವೇ ಈ ಕುರಿತ ಎಲ್ಲವೂ ಬಗೆಹರಿಯಲಿದೆ. ಆದರೆ ನಾನು ರಾಜೀನಾಮೆ ನೀಡಿರುವ ಕುರಿತು ಕೆಲ ನಾಯಕರು ನನ್ನ ಜೊತೆ ಮಾತನಾಡಿದ್ದಾರೆ. ಆದರೂ ರಾಜೀನಾಮೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ರಾಜ್ಯದ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.