ಬೆಂಗಳೂರು: ಬೆಳಗಾವಿ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಆಡಳಿತ ಸರ್ಕಾರ ಹಾಗೂ ವಿರೋಧಿ ಪಕ್ಷದ ನಡುವಿನ ಚರ್ಚೆ ಕಾವೇರುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ಫಲಿತಾಂಶ ಪ್ರತಿಧ್ವನಿಸುವ ಸಾಧ್ಯತೆಯಿದ್ದು, ಮೈತ್ರಿ ಸರ್ಕಾರ ಹಾಗೂ ಬಿಜೆಪಿ ನಡುವೆ ಕಾಲೆಳೆಯುವ ಪ್ರಸಂಗಗಳು ಕಾಣುವ ಸಾಧ್ಯತೆ ಇದೆ.
ಬೆಳಗ್ಗೆ 11ಕ್ಕೆ ಕಲಾಪ ಆರಂಭವಾಗಲಿದ್ದು, ಆ ವೇಳೆಗೆ ಪಂಚರಾಜ್ಯಗಳ ಫಲಿತಾಂಶ ಸ್ಪಷ್ಟವಾಗಲಿದೆ. ಇದೇ ಸಂದರ್ಭದಲ್ಲಿ ಮೈತ್ರಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ಬಿಜೆಪಿಗೆ ಬಲ ಬರುತ್ತಾ? ಅಥವಾ ಬ್ರೇಕ್ ಬೀಳುತ್ತಾ ಎಂಬುದು ಕೂಡ ಸ್ಪಷ್ಟವಾಗುತ್ತೆ. ಒಂದೊಮ್ಮೆ ಬಿಜೆಪಿ ವಿರುದ್ಧ ಫಲಿತಾಂಶ ಬಂದರೆ ಬಿಜೆಪಿಯ ಉಗ್ರಹೋರಾಟ ಇವತ್ತಿನ ಮಟ್ಟಿಗೆ ಸ್ವಲ್ಪ ವೇಗ ಕಳೆದುಕೊಳ್ಳಲಿದೆ.
ಚುನಾವಣಾ ಫಲಿತಾಂಶ ಬಿಜೆಪಿ ಪರ ಫಲಿತಾಂಶ ಬಂದರೆ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧಕ್ಷ ಬಿಎಸ್ ಯಡಿಯೂರಪ್ಪ ಮತ್ತು ಮುಖಂಡರು ನಿರುಸಿನ ವಾಗ್ದಾಳಿ ಮಾಡುವುದಂತೂ ಸತ್ಯ. ಈ ನಡುವೆ ಸಿದ್ದರಾಮಯ್ಯ ವಿದೇಶ ಪ್ರವಾಸ, 36 ಸಾವಿರ ಕೋಟಿ ರೂ. ಲೆಕ್ಕಕ್ಕೆ ಸಿಗದ ಬಜೆಟ್ ಹಗರಣದ ಆರೋಪ, ರೈತರ ಸಾಲಮನ್ನಾ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ನಿರ್ಧರಿಸಿದೆ.
ಬೆಳಗಾವಿ ಸದನದ ನಡುವೆಯೇ ಕಾಂಗ್ರೆಸ್ ಅತೃಪ್ತರ ನಡೆಯೂ ಕೂಡ ಕುತೂಹಲ ಮೂಡಿಸಿದ್ದು, ಸದನದ ಮೊದಲ ದಿನ ಗೈರಾಗಿದ್ದ ಸಿದ್ದರಾಮಯ್ಯ ಅವರ ಆಪ್ತರು ಇಂದು ಸದನಕ್ಕೆ ಹಾಜರಾಗುತ್ತಾರಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ. ಇತ್ತ ಅತೃಪ್ತರ ನಿಲುವು ಯಾವ ತಿರುವು ಪಡೆದುಕೊಳ್ಳುತ್ತೆ ಎಂಬುದನ್ನು ಕಾದುನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv