ಚಿಕ್ಕೋಡಿ (ಬೆಳಗಾವಿ): ಅಕ್ರಮವಾಗಿ 300 ಕೆಜಿ ಬೆಳ್ಳಿ ಸಾಗಿಸುತ್ತಿದ್ದ ಇಬ್ಬರನ್ನು ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೋಲಿಸರು ಬಂಧಿಸಿದ್ದಾರೆ.
ತಮಿಳುನಾಡಿನ ಸವಾಪೇಟ್ ಸೇಲಂ ನಿವಾಸಿ ವಿಜಯಕುಮಾರ್ ಆತ್ಮಾರಾಮ್ ಶಿಂಧೆ (48) ಹಾಗೂ ಮಹಾರಾಷ್ಟ್ರದ ಸಾತಾರ ಜಿಲ್ಲೆ ಕಟಾವ್ ತಾಲೂಕಿನ ಕಲ್ಲೇಡೊನ್ ಗ್ರಾಮದ ನಿವಾಸಿ ರೀಯಾಜ್ ಶಾಕೀರ್ ಹುಸೇನ್ ಮುಲ್ಲಾನಿ (20) ಬಂಧಿತ ಆರೋಪಿಗಳು. ಬಂಧಿತರಿಂದ 300 ಕೆ.ಜಿ ಬೆಳ್ಳಿಯ ಗಟ್ಟಿ ಮತ್ತು ಆಭರಣಗಳು, 63 ಲಕ್ಷ ರೂ. ನಗದು, 3 ಲಕ್ಷ ರೂ. ಹಾಗೂ 9 ಲಕ್ಷ ಮೌಲ್ಯದ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಆರೋಪಿಗಳು ಬೆಳ್ಳಿಯ ಗಟ್ಟಿ ಮತ್ತು ಆಭರಣವನ್ನು ಅಕ್ರಮವಾಗಿ ಕಾರಿನಲ್ಲಿ ಮಹಾರಾಷ್ಟ್ರದಿಂದ ತಮಿಳನಾಡಿನ ಸೇಲಂಗೆ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಯಮಕನಮರಡಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ತಂಡ ರಚಿಸಿದ ಪೊಲೀಸರು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ದಾದಬಾನಹಟ್ಟಿ ಕ್ರಾಸ್ ಬಳಿ ಎರಡು ಕಾರನ್ನು ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಬೆಳ್ಳಿ ಹಾಗೂ ನಗದು ಹಣ ಪತ್ತೆಯಾಗಿತ್ತು. ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Advertisement
ಈ ಕುರಿತು ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.