– ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆ
ಬೆಂಗಳೂರು: ದೆಹಲಿ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದಿದ್ದ ಬೆಳಗಾವಿಯ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆ ಕಂಡಿದೆ.
ಈ ಕುರಿತು ಪಬ್ಲಿಕ್ ಟಿವಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿ, ಬೆಳಗಾವಿಯ ಮೂವರಲ್ಲಿ ಕೊರೊನಾ ಸೋಂಕು ತಗುಲಿದೆ. ಈ ಮೂವರು ದೆಹಲಿಯ ಜಮಾಜ್ ಸಭೆಗೆ ತೆರಳಿದ್ದವರೇ ಆಗಿದ್ದಾರೆ. ಶಿವಮೊಗ್ಗದ ಲ್ಯಾಬ್‍ನಿಂದ ಬಂದಿರುವ ರಿಪೋರ್ಟ್ ನಲ್ಲಿ ಸೋಂಕು ತಗುಲಿರುವುದು ಖಚಿತವಾಗಿದೆ. ಆದರೆ ಪುಣೆಯ ರಿಪೋರ್ಟ್ ಗಾಗಿ ಬೆಳಗಾವಿ ಜಿಲ್ಲಾಡಳಿತ ಕಾಯುತ್ತಿದೆ. ಪುಣೆಯ ಲ್ಯಾಬ್ ವರದಿ ಬಂದ ನಂತರ ಅಧಿಕೃತ ಘೋಷಣೆ ಮಾಡಲಾಗುತ್ತದೆ. ಸದ್ಯ ಮೂವರು ಸೋಂಕಿತರು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮವು ಬೆಳಗಾವಿಯಲ್ಲಿ ಆತಂಕ ಸೃಷ್ಟಿಸಿದೆ. ಈ ಕಾರ್ಯಕ್ರಮದಿಂದ ಬೆಳಗಾವಿಗೆ ವಾಪಸ್ ಆಗಿದ್ದ 62 ಜನರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿ ಕ್ವಾರಂಟೈನ್‍ನಲ್ಲಿ ಇರಿಸಿದೆ. ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ 35 ಜನರ ಥ್ರೋಟ್ ಸ್ವ್ಯಾಬ್, ರಕ್ತದ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು.
Advertisement
35 ಜನರ ಪೈಕಿ 27 ಮಂದಿಯ ಮಾದರಿಯನ್ನು ಶಿವಮೊಗ್ಗ ಹಾಗೂ 6 ಜನರ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಬೆಂಗಳೂರಿಗೆ ಕಳುಹಿಸಿದ್ದ ಆರು ಮಾದರಿಗಳಲ್ಲಿ ಮೂವರ ರಿಪೋರ್ಟ್ ಪಾಸಿಟೀವ್ ಬಂದಿದೆ. ಇದರಿಂದಾಗಿ ಈವರೆಗೂ ದೆಹಲಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಿಸಿದ್ದ ರಾಜ್ಯದ ಒಟ್ಟು 13 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
Advertisement
ಸೋಂಕಿತರು ನಗರದ ಕ್ಯಾಂಪ್ ಪ್ರದೇಶದ ಕಸಾಯಿ ಗಲ್ಲಿ, ಬೆಳಗಾವಿ ತಾಲೂಕಿನ ಬೆಳಗುಂದಿ ಹಾಗೂ ಹಿರೇಬಾಗೇವಾಡಿ ನಿವಾಸಿಗಳಾಗಿದ್ದಾರೆ. ಅವರು ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ 3ಕ್ಕೂ ಹೆಚ್ಚು ದಿನ ಭಾಗಿಯಾಗಿದ್ದರು. ಬಳಿಕ ದೆಹಲಿಯಿಂದ ಸಂಪರ್ಕ್ ಕ್ರಾಂತಿ ಎಕ್ಸ್‍ಪ್ರೆಸ್ ರೈಲಿನಲ್ಲಿ ರಾಜ್ಯಕ್ಕೆ ಆಗಮಿಸಿದ್ದರು ಎಂಬ ಮಾಹಿತಿಯನ್ನು ಜಿಲ್ಲಾಡಳಿತ ಕಲೆಹಾಕಿದೆ. ಅಷ್ಟೇ ಅಲ್ಲದೆ ಮತ್ತಷ್ಟು ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕುತ್ತಿದ್ದು, ಸೋಂಕಿತರು ವಾಸವಿದ್ದ ಸ್ಥಳವನ್ನು ಬಫರ್ ಜೋನ್ ಎಂದು ಘೋಷಣೆ ಮಾಡಲಾಗಿದೆ.