ಬೆಳಗಾವಿ: ಪತ್ನಿಯ ಸೀಮಂತ ಕಾರ್ಯಕ್ಕೆ ರಜೆಯ ಮೇಲೆ ಬಂದಿದ್ದ ಯೋಧರೊಬ್ಬರು ನಿನ್ನೆ ತಡರಾತ್ರಿ ಬೈಕ್ ಮೇಲೆ ಮರಳುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಲಗಾ ಬಳಿಯ ರೈಸ್ ಮಿಲ್ ಹತ್ತಿರ ನಡೆದಿದೆ.
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದ ಭಾರತೀಯ ಸೇನೆಯ ಯೋಧ ಪ್ರಕಾಶ್ ಮಡಿವಾಳಪ್ಪ ಸಂಗೊಳ್ಳಿ (28) ಮೃತ ಯೋಧ. ಮಡಿವಾಳಪ್ಪ ಅವರು ಕಳೆದ 9 ವರ್ಷಗಳಿಂದ ಬೆಳಗಾವಿಯ ಮರಾಠಾ ಲೈಟ್ ಇನ್‍ಫೇಂಟರಿ 9ನೇ ರೆಜಿಮೆಂಟ್‍ನಲ್ಲಿ ಸೈನಿಕನಾಗಿ ಬೆಳಗಾವಿಯಲ್ಲಿ ಸೇವೆಯಲ್ಲಿದ್ದರು. ಇದನ್ನೂ ಓದಿ: ಆಂಧ್ರಪ್ರದೇಶದ ಕಾರ್ಖಾನೆಯಲ್ಲಿ ಅನಿಲ ಸೋರಿಕೆ – 200 ಮಹಿಳಾ ಕಾರ್ಮಿಕರು ಅಸ್ವಸ್ಥ
ಕಳೆದ ಎರಡು ವರ್ಷಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರು ಮಗುವಿನ ನಿರೀಕ್ಷೆಯಲ್ಲಿದ್ದರು. ಪತ್ನಿಯ ಸೀಮಂತ ಕಾರ್ಯವನ್ನು ಜೂ. 12ರಂದು ಅದ್ಧೂರಿಯಾಗಿ ಜರುಗಿಸಲು ರಜೆ ಪಡೆದು ಸ್ವಗ್ರಾಮಕ್ಕೆ ಬಂದಿದ್ದರು. ಆದರೆ ನಿನ್ನೆ ತಡರಾತ್ರಿ ಬೆಳಗಾವಿಯಿಂದ ಬೈಕ್‍ನಲ್ಲಿ ಬರುತ್ತಿದ್ದ ವೇಳೆ ಹಲಗಾ ಬಳಿಯ ರೈಸ್ ಮಿಲ್ ಹತ್ತಿರ ಅಪರಿಚಿತ ವಾಹನೊಂದು ಡಿಕ್ಕಿ ಹೊಡೆದು ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ 6 ವರ್ಷ ಕಳೆದ್ರೂ ಫಸ್ಟ್ ನೈಟ್ ಆಗಿಲ್ಲ – ಪತಿಯ ಮನೆ ತೊರೆಯುವಂತೆ ಪತ್ನಿಗೆ ಕೋರ್ಟ್ ಆರ್ಡರ್
ಸೀಮಂತ ಕಾರ್ಯಕ್ರಮದ ಸಂತೋಷದಲ್ಲಿ ಇರಬೇಕಿದ್ದ ಯೋಧನ ಕುಟುಂಬವಿಗಾ ಕಣ್ಣೀರಿಡುವಂತಾಗಿದೆ. ಇತ್ತ ಯೋಧನ ಪಾರ್ಥಿವ ಶರೀರ ಬೈಲಹೊಂಗಲ ಪಟ್ಟಣದಿಂದ ಗ್ರಾಮಕ್ಕೆ ತೆರಳುವಾಗ ಯೋಧನ ಗೆಳೆಯರು, ಗ್ರಾಮದ ಯುವಕರು ನೂರಾರು ಸಂಖ್ಯೆಯಲ್ಲಿ ಸೇರಿ ಬೈಕ್ ರ್ಯಾಲಿ ಮಾಡುವ ಮೂಲಕ ಗ್ರಾಮಕ್ಕೆ ಕೊಂಡೊಯ್ದರು. ಪ್ರಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ಯೋಧನ ಪತ್ನಿಯ ಆಕ್ರಂದನ ಕಂಡು ಅಂತ್ಯಕ್ರಿಯೆಯಲ್ಲಿ ಸೇರಿದ್ದ ಜನರು ಕೂಡ ಕಣ್ಣೀರು ಹಾಕಿದರು. ಬಳಿಕ ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಯೋಧನ ಮನೆ ಮುಂಭಾಗದಲ್ಲಿ ಇರಿಸಿ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.




