ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿ ನಿರ್ಮಿಸಲಾಗಿರುವ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಲಿದ್ದಾರೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.
ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಸಮಯ ನೀಡುವಂತೆ ಈಗಾಗಲೇ ಸಿಎಂ ಕಚೇರಿಗೆ ಪತ್ರ ಬರೆಯಲಾಗಿದೆ. ವಾರದೊಳಗೆ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಉದ್ಘಾಟನೆಗೊಳ್ಳಲಿದೆ ಎಂದರು.
Advertisement
Advertisement
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿವೆ. ನಗರ ನಿವಾಸಿಗಳು ಸ್ಮಾರ್ಟ್ ಆಲೋಚನೆ ಮಾಡಿ ಉದ್ಯೋಗ ಹೊಂದಬೇಕು. ಕಾಮಗಾರಿ ನಡೆಯುವ ವೇಳೆ ಸ್ಥಳೀಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಅವರು, ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸವಾರರಿಗೆ ಅನುಕೂಲ ಕಲ್ಪಿಸಲು ರೇಡಿಯಂ ಅಳವಡಿಕೆ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ಸ್ಮಾರ್ಟ್ ಸಿಟಿ ಎಂಡಿ ಶಶೀಧರ್ ಕುರೇರ್ ಅವರಿಗೆ ಸೂಚನೆ ನೀಡಿದರು.
Advertisement
ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಓರ್ವ ನಾಗರಿಕ ಮೃತಪಟ್ಟಿದ್ದು ನನ್ನ ಗಮನಕ್ಕೆ ಬಂದಿದೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು. ಮುಂದೆ ಪ್ರಾಣಹಾನಿ ಆದರೆ ಗುತ್ತಿಗೆದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಮಳೆಗಾಲ ಆರಂಭಕ್ಕೂ ಮುನ್ನವೇ ಕೆಲಸ ಪೂರ್ಣಗೊಳಿಸಬೇಕಿದೆ. ಹೀಗಾಗಿ ಟುವೇದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಆರು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಅಲ್ಲಿಯ ತನಕ ಸಾರ್ವಜನಿಕರಿಗೆ ಕಷ್ಟ ಆಗಲಿದೆ. ಕೆಲಸ ಆಮೆಗತಿಯಲ್ಲಿ ನಡೆದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಲಾಭ. ಈ ಕಾರಣಕ್ಕೆ ನಗರದೆಲ್ಲೆಡೆ ತ್ವರಿತ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.
Advertisement
ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ಮೂರು ವರ್ಷದಿಂದ ನಡೆಯುತ್ತಿದ್ದು, ವಿಳಂಬದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಆಗ ಬಸ್ ನಿಲ್ದಾಣದ ಅಡಿಗಲ್ಲನ್ನು ಸಿದ್ದರಾಮಯ್ಯನವರು ಮಾಡಿದ್ದರು. ಹೀಗಾಗಿ ತಡವಾಗಿದೆ. ಕೆಲಸ ತ್ವರಿತವಾಗಿ ನಡೆಸಿ ಯಡಿಯೂರಪ್ಪ ಕೈಯಿಂದ ಉದ್ಘಾಟನೆ ಮಾಡಿಸುವುದಾಗಿ ಹಾರಿಕೆಯ ಉತ್ತರ ನೀಡಿದರು.
ವಿಶ್ವೇಶ್ವರಯ್ಯ ನಗರದಲ್ಲಿ ಸ್ಥಾಪಿಸಿರುವ ಕಮಾಂಡ್ ಸೆಂಟರ್ ನಿಂದ ಪರಿಶೀಲನೆ ಆರಂಭಿಸಿದ ಸಚಿವರು ಸಿಬಿಟಿ, ಕಣಬರಗಿ ಕೆರೆ, ರಾಮತೀರ್ಥ ನಗರ, ಶ್ರೀನಗರ ರಸ್ತೆ ವಂಟಮುರಿ ಪಿ.ಎಚ್.ಸಿ., ಕೆಪಿಟಿಸಿಎಲ್ ರಸ್ತೆ, ಕಾಲೇಜು ರಸ್ತೆ, ಶುಕ್ರವಾರ ಪೇಟ್ ರಸ್ತೆ ಹಾಗೂ ಮಹಾತ್ಮಾ ಫುಲೆ ರಸ್ತೆಯಲ್ಲಿ ಕಾಮಗಾರಿ ಪರಿಶೀಲಿಸಿದರು. ಸ್ಮಾರ್ಟ್ ಸಿಟಿ ಯೋಜನೆ ಎಂ.ಡಿ. ಶಶಿಧರ್ ಕುರೇರ್ ಸಚಿವರಿಗೆ ಸಾಥ್ ನೀಡಿದರು.