ಬೆಳಗಾವಿ: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯನ್ನು (Hate Speech Bill) ವಿಧಾನಸಭೆಯಲ್ಲಿ ಸರ್ಕಾರ ಪಾಸ್ ಮಾಡುವಲ್ಲಿ ಯಶಸ್ವಿಯಾಗಿದೆ.
ಸರ್ಕಾರ ಮಂಡಿಸಿದ್ದ ಮಸೂದೆಗೆ ವಿಪಕ್ಷಗಳ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ವಿಧೇಯಕದ ಪ್ರತಿಗಳನ್ನು ಹರಿದು ಬಿಸಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ವಿಪಕ್ಷಗಳ ವಿರೋಧ ಹೆಚ್ಚಾಗುತ್ತಿದ್ದಂತೆ ಗದ್ದಲದ ನಡುವೆಯೇ ಮಸೂದೆಯನ್ನು ಸರ್ಕಾರ ಪಾಸ್ ಮಾಡಿಕೊಂಡಿತು.
ಮೊದಲು ಮಸೂದೆಯ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ (Parameshwar) ವಿವರಣೆ ನೀಡಿ, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಸಮಾಜಕ್ಕೆ ನೋವಾಗುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದರ ಪ್ರಮಾಣ ಜಾಸ್ತಿಯಾಗಿ ಕೊಲೆಗಳು, ಹೊಡೆದಾಟಗಳು ನಡೆದಿವೆ. ಇದನ್ನು ನಿಯಂತ್ರಣ ಮಾಡಬೇಕಾಗಿದೆ ಎಂದರು.
ಸಾಮಾಜಿಕ, ರಾಜಕೀಯ ಸಭೆಗಳಲ್ಲಿ ಆಡುವ ದ್ವೇಷದ ಮಾತುಗಳು ಮತ್ತೊಂದು ಸಮುದಾಯದ ಮೇಲೆ ಪರಿಣಾಮ ಬೀರುತ್ತಿದೆ. ದ್ವೇಷ ಭಾಷಣದಲ್ಲಿ ಮತ್ತೊಂದು ಸಮುದಾಯದ ಬಗ್ಗೆ ಕೆಟ್ಟ ಮಾತುಗಳನ್ನು ಆಡಲಾಗಿದೆ. ದ್ವೇಷ ಭಾಷಣ ಮಾಡುವ ವ್ಯಕ್ತಿಗಳಿಗೆ ಎಷ್ಟು ದಿನ ನಿರ್ಬಂಧ ಹೇರಲು ಸಾಧ್ಯ? ಹೀಗಾಗಿ ಕಾನೂನು ತರಲಾಗಿದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಮೊದಲ ದ್ವೇಷ ಭಾಷಣ ತಪ್ಪಿಗೆ 1 ರಿಂದ 7 ವರ್ಷ ಜೈಲು, 50 ಸಾವಿರ ರೂ ದಂಡ. ದ್ವೇಷ ಭಾಷಣ ಪುನರಾವರ್ತನೆಗೆ 2 ವರ್ಷದಿಂದ ಗರಿಷ್ಠ ಶಿಕ್ಷೆ 7 ವರ್ಷ ಜೈಲು, 1 ಲಕ್ಷ ದಂಡ ವಿಧಿಸಲು ಮಸೂದೆಯಲ್ಲಿ ಅವಕಾಶ ಕೊಡಲಾಗಿದೆ. ತಪ್ಪು ಪುನರಾವರ್ತನೆಗೆ ಈ ಮೊದಲು 10 ವರ್ಷ ಜೈಲು ಇದ್ದಿದ್ದನ್ನು 7 ಕ್ಕೆ ಇಳಿಸಲಾಗಿದೆ ಅಂತ ಪರಮೇಶ್ವರ್ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಭಾರೀ ಗದ್ದಲದ ನಡುವೆ ಲೋಕಸಭೆಯಲ್ಲಿ G Ram G ಮಸೂದೆ ಅಂಗೀಕಾರ; ಮಸೂದೆಯ ಪ್ರತಿ ಹರಿದು ವಿಪಕ್ಷಗಳ ಆಕ್ರೋಶ
ಈಗಾಗಲೇ ಮುದ್ರಿತವಾಗಿರುವ ಪುಸ್ತಕ, ಗ್ರಂಥದಲ್ಲಿ ದ್ವೇಷದ ಮಾತುಗಳು ಇವೆ ಎಂದಾದರೆ ಏನು ಕ್ರಮ? ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ಕೊಟ್ಟ ಪರಮೇಶ್ವರ್, ಹಳೆ ಪುಸ್ತಕದಲ್ಲಿ ಇಂತಹ ಅಂಶ ಇದ್ದರೂ ಅದು ಕೂಡಾ ಈ ಕಾನೂನಿನ ವ್ಯಾಪ್ತಿಯಲ್ಲಿ ಬರಲಿದೆ. ಅಂತಹವನ್ನು ಬ್ಯಾನ್ ಮಾಡುವ ಪ್ರಕ್ರಿಯೆಗೆ ಅವಕಾಶ ಇದೆ ಎಂದರು.
ವಿಧೇಯಕ ಮೇಲೆ ಮಾತಾಡಿದ ಆರ್ ಅಶೋಕ್, ರಾಜಕೀಯ ದ್ವೇಷ ತೀರಿಸಿಕೊಳ್ಳಲು ಇದನ್ನು ಬಳಕೆ ಮಾಡುವಂತಹ ಅವಕಾಶ ಸಿಕ್ಕಂತಾಗಿದೆ. ಪೊಲೀಸರು ಹಿಟ್ಲರ್ ಆಗಲು ಅವಕಾಶ ಇದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಲಿದೆ. ಭ್ರಷ್ಟಾಚಾರದಂತಹ ಗಂಭೀರ ಆರೋಪ ಸುದ್ದಿ ಮಾಡಿದರೆ ಮಾಧ್ಯಮದ ಪ್ರತಿನಿಧಿಗಳು ಮೊದಲೇ ಜಾಮೀನು ಪಡೆಯುವಂತಹ ಸ್ಥಿತಿ ಇದೆ. ಇದು ಪ್ರಜಾಪ್ರಭುತ್ವ ವಿರೋಧಿ, ಅಭಿವ್ಯಕ್ತಿ ಸ್ವಾತಂತ್ರ್ಯ ವಿರೋಧಿ ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಸದಸ್ಯರ ಆಕ್ಷೇಪ ಸಚಿವ ಬೈರತಿ ಸುರೇಶ್ ಕರಾವಳಿ ಬಗ್ಗೆ ನೀಡಿದ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು. ಕರಾವಳಿಯಲ್ಲಿ ಬೆಂಕಿ ಹಾಕಿ ಇಲ್ಲೂ ಬೆಂಕಿ ಹಾಕ್ತಿದ್ದಾರೆಂಬ ಬೈರತಿ ಸುರೇಶ್ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಾಯ್ತು. ಕರಾವಳಿ ಶಾಸಕರು ಕೆರಳಿ ಏಕಾಏಕಿ ಸದನದ ಬಾವಿಗಿಳಿದರು. ಇದರಿಂದ ವಿಪಕ್ಷಗಳ ಉಳಿದ ಸದಸ್ಯರಲ್ಲೂ ಗೊಂದಲ ಆಯ್ತು. ಕೊನೆಗೆ ಗದ್ದಲ ಹೆಚ್ಚಾಯ್ತು. ಗೊಂದಲ, ಗದ್ದಲದ ನಡುವೆ ಸರ್ಕಾರ ವಿಧೇಯಕ ಪಾಸ್ ಮಾಡಿಕೊಳ್ತು. ಅಶೋಕ್ ಸೇರಿ ಅನೇಕರು ಮಸೂದೆ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪೊಲೀಸ್ ಇಲಾಖೆಯ 3,600 ಖಾಲಿ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ: ಪರಮೇಶ್ವರ್
ಮಸೂದೆಯಲ್ಲಿ ಏನಿದೆ?
– ನಿರ್ದಿಷ್ಟ ವ್ಯಕ್ತಿ, ಸಮೂಹ, ಸಂಸ್ಥೆಗಳ ವಿರುದ್ಧ ದ್ವೇಷ ಹುಟ್ಟಿಸುವ ಅಪರಾಧಗಳ ತಡೆಗೆ ಅವಕಾಶ.
– ಮೊದಲ ಬಾರಿಗೆ ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಟ 1 ವರ್ಷ, ಗರಿಷ್ಟ 7 ವರ್ಷದವರೆಗೆ ಜೈಲು, 50 ಸಾವಿರ ರೂ ದಂಡ.
– ಅಪರಾಧ ಪುನರಾವರ್ತನೆಯಾದರೆ ಕನಿಷ್ಟ 2 ವರ್ಷದಿಂದ ಗರಿಷ್ಠ 7 ವರ್ಷದ ವರೆಗೆ ಜೈಲು ಶಿಕ್ಷೆ, 1 ಲಕ್ಷ ರೂ ದಂಡ
– ದ್ವೇಷ ಭಾಷಣ ಮಾಡಿ ಕೇಸ್ ಬಿದ್ದರೆ ಅದು ಜಾಮೀನು ರಹಿತ ಪ್ರಕರಣವಾಗಲಿದೆ.
– ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರ ಮೂಲಕ ದ್ವೇಷ ಭಾಷಣಗಳ ವಿಚಾರಣೆಗೆ ಅವಕಾಶ.
– ದ್ವೇಷ ಭಾಷಣಗಳ ಪ್ರಕರಣಗಳನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಉಪಪೊಲೀಸ್ ವರಿಷ್ಠಾಧಿಕಾರಿ ದರ್ಜೆಗಿಂತ ಕಡಿಮೆ ಇಲ್ಲದ ಯಾರೇ ಪೊಲೀಸ್ ಅಧಿಕಾರಿಯು ಮಾಹಿತಿ ಸ್ವೀಕರಿಸಿದರೆ ವಿಚಾರಣೆ ಮಾಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಅವಕಾಶ.
– ಈ ಕಾಯ್ದೆಯಡಿ ದ್ವೇಷ ಭಾಷಣಗಳಿಗೆ ನೊಂದಾಯಿತ ಅಥವಾ ನೊಂದಾಯಿತವಲ್ಲದ ಸಂಘ ಸಂಸ್ಥೆಗಳೂ ಹೊಣೆಗಾರರಾಗಿರುತ್ತಾರೆ ಎಂದು ಉಲ್ಲೇಖ.
– ದ್ವೇಷ ಭಾಷಣಗಳ ಕಂಟೆಂಟ್ ಗಳನ್ನು ಡೊಮೈನ್ ನಿಂದ ಬ್ಲಾಕ್ ಮಾಡುವ ಅಥವಾ ತೆಗೆದು ಹಾಕುವ ಅಧಿಕಾರ.

