– ಸರ್ಕಾರಕ್ಕೆ ರೈತರು, ಸಂಘಟನೆಗಳ ಪ್ರತಿಭಟನೆ ಬಿಸಿ
ಬೆಳಗಾವಿ: ನಾಳೆಯಿಂದ ವಿಧಾನಮಂಡಲದ ಚಳಿಗಾಲ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಮತಾಂತರ ಯುದ್ಧವೇ ನಡೆಯುವ ಸಾಧ್ಯತೆ ಇದೆ. ಮತಾಂತರ ನಿಷೇಧ ಕಾನೂನು ಜಾರಿಗೆ ರಾಜ್ಯ ಸರ್ಕಾರ ಪ್ರಯತ್ನ ಮಾಡ್ತಿದೆ.
ಈ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತತ್ರ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಕಾನೂನು ಸಚಿವ ಮಾಧುಸ್ವಾಮಿ ಕೂಡ, ವಿವಾಹ ನೋಂದಣಿ ಮಾಡುವಂತೆ ಮತಾಂತರವನ್ನೂ ಕೂಡ ನೋಂದಣಿ ಮಾಡುವಂತಹ ಪದ್ಧತಿಯನ್ನು ಮತಾಂತರ ನಿಷೇಧ ಕಾಯಿದೆಯಲ್ಲಿ ತರುವ ಚಿಂತನೆ ಇದೆ ಅಂದಿದ್ದಾರೆ. ಆದರೆ ಮತಾಂತರ ನಿಷೇಧ ಕಾನೂನಿಗೆ ನಮ್ಮ ವಿರೋಧವಿದೆ. ಅಧಿವೇಶನದಲ್ಲಿ ವಿರೋಧ ವ್ಯಕ್ತಪಡಿಸೋದಾಗಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಸಿಎಂ ಇಬ್ರಾಹಿಂ ಮಾತಾಡಿ, ಮತಾಂತರ ಅವರವರ ಇಚ್ಛೆ. ಲವ್ ಇದ್ಮೇಲೆ ಜಿಹಾದ್ ಎಲ್ಲಿ ಬರುತ್ತೆ..? ಬಲವಂತ ಇದ್ದರೆ ಪೊಲೀಸರು ಕ್ರಮ ವಹಿಸಲಿ ಅಂದಿದ್ದಾರೆ. ಆದರೆ, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಜನರ ಬಡತನ, ಅಸಹಾಯಕತೆ ದುರುಪಯೋಗಕ್ಕೆ ಅವಕಾಶ ಕೊಡಬಾರದು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಈ ಮಧ್ಯೆ, ಮತಾಂತರ ಜೊತೆಗೆ ಗುತ್ತಿಗೆದಾರರ 40 ಪರ್ಸೆಂಟ್ ಕಮಿಷನ್ ಆರೋಪ, ಬಿಟ್‍ಕಾಯಿನ್ ಹಗರಣ, ನೈತಿಕ ಪೊಲೀಸ್‍ಗಿರಿ, ಮೇಕೆದಾಟು ಅಣೆಕಟ್ಟು ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ಸಜ್ಜಾಗಿದೆ. ಇದನ್ನೂ ಓದಿ: ನಾಳೆಯಿಂದ ಬೆಳಗಾವಿಯಲ್ಲಿ ಅಧಿವೇಶನ – ಸಿದ್ಧತೆ ಪರಿಶೀಲಿಸಿದ ಸ್ಪೀಕರ್ ಕಾಗೇರಿ
ಸರ್ಕಾರಕ್ಕೆ ಅಧಿವೇಶನದ ವೇಳೆ ಪ್ರತಿಭಟನೆ ಬಿಸಿ ಜೋರಾಗಿಯೇ ತಟ್ಟಲಿದೆ. ಕನ್ನಡ ಸೌಧದ ಬಳಿ ಪ್ರತಿಭಟನೆಗೆ 40 ಸಂಘಟನೆಗಳು ನೋಂದಾಯಿಸಿಕೊಂಡಿವೆ. ರಾಜ್ಯ ಸರ್ಕಾರವೂ ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ, ನಾಳೆ ಕನ್ನಡಸೌಧಕ್ಕೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದಾರೆ. ಪ್ರತಿಭಟನೆ ಹತ್ತಿಕ್ಕಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸೋದಾಗಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವಿವಾಹ ನೋಂದಣಿಯಂತೆ ಮತಾಂತರ ನೋಂದಣಿ ಮಾಡೋ ಚಿಂತನೆ ನಡೆದಿದೆ: ಮಾಧುಸ್ವಾಮಿ
ಅಧಿವೇಶನಕ್ಕೂ ಮುನ್ನ ಬೆಳಗಾವಿಯಲ್ಲಿ ರೈತ ಅಧಿವೇಶನ ನಡೀತು. ಸಂಕಲ್ಪ ಗಾರ್ಡ್ ಹೆಸರಿನಲ್ಲಿ ವಿವಿಧ ರೈತಸಂಘಟನೆಗಳು 16 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ನಿರ್ಧಾರ ಕೈಗೊಂಡ್ರು. ಈ ಮಧ್ಯೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಎಪಿಎಂಸಿ ಕಾಯಿದೆ ರದ್ದು ಮಾಡಲ್ಲ ಅಂತ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.