Connect with us

ಕನ್ನಡ ಸೌಧದ ಅರ್ಥವೇ ಕಳೆಯುವಂತೆ ನಡೆದುಕೊಂಡಿದ್ದಾರೆ ಉತ್ತರ ಕರ್ನಾಟಕದ ಶಾಸಕರು

ಕನ್ನಡ ಸೌಧದ ಅರ್ಥವೇ ಕಳೆಯುವಂತೆ ನಡೆದುಕೊಂಡಿದ್ದಾರೆ ಉತ್ತರ ಕರ್ನಾಟಕದ ಶಾಸಕರು

ಬೆಳಗಾವಿ: ರಾಜಧಾನಿ ಬೆಂಗಳೂರಿನಲ್ಲಿ ಸದನ ನಡೆದರೆ ಶಾಸಕರು ಚಕ್ಕರ್ ಹಾಕುತ್ತಾರೆ. ಅಂಥದ್ರಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆದರೆ ಬರುತ್ತಾರಾ ಎಂದು ಸದನ ನಡೆಯುವ ಮೊದಲೇ ಮಾಧ್ಯಮಗಳು ಎಚ್ಚರಿಕೆ ದಾಟಿಯಲ್ಲಿ ಸುದ್ದಿಯನ್ನು ಪ್ರಸಾರ ಮಾಡಿದ್ದವು.

ಈ ಸುದ್ದಿಯನ್ನು ನೋಡಿಯಾದರೂ ಶಾಸಕರು ಎಚ್ಚೆತ್ತು ಸದನಕ್ಕೆ ಬರುತ್ತಾರೆ ಎಂದು ನಿರೀಕ್ಷೆ ಮಾಡಿದ್ದರೆ ಶಾಸಕರು ನಾವು ಇರುವುದು ಹೀಗೆ. ನಮ್ಮನ್ನು ಪ್ರಶ್ನೆ ಮಾಡಲು ನೀವು ಯಾರು ಎನ್ನುವ ರೀತಿಯಲ್ಲಿ ವರ್ತಿಸಿದ್ದಾರೆ. ಅದರಲ್ಲೂ, ಯಾವುದಕ್ಕಾಗಿ ಬೆಳಗಾವಿಯಲ್ಲಿ ಕನ್ನಡಸೌಧ ಕಟ್ಟಿದ್ದಾರೋ ಅದರ ಅರ್ಥವೇ ಕಳೆಯುವಂತೆ ನಮ್ಮ ಉತ್ತರ ಕರ್ನಾಟಕದ ಶಾಸಕರು ನಡೆದುಕೊಂಡಿದ್ದಾರೆ.

ಸೋಮವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ, ಪ್ರಶ್ನೋತ್ತರ ಕಲಾಪದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ನಿಗದಿಯಾಗಿತ್ತು. 224 ಶಾಸಕರ ಪೈಕಿ, ಉತ್ತರ ಕರ್ನಾಟಕದ 11 ಶಾಸಕರು ಸೇರಿದಂತೆ, 43 ಶಾಸಕರು ಮಾತ್ರ ಸದನದಲ್ಲಿ ಹಾಜರಿದ್ದರು. 13 ಸಚಿವರ ಪೈಕಿ, ಕೇವಲ ಐವರು ಸಚಿವರು ಮಾತ್ರ ಇದ್ದಿದ್ದನ್ನು ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

 

ಉತ್ತರ ಕರ್ನಾಟಕ ಭಾಗದ ಸಚಿವರು ಇಲ್ಲ ಅಂತ ಜೆಡಿಎಸ್‍ನ ವೈ.ಎಸ್.ವಿ. ದತ್ತಾ ಆಕ್ಷೇಪಕ್ಕೆ ಉತ್ತರಿಸಿದ ಸಚಿವ ಎಂ.ಬಿ. ಪಾಟೀಲ್, ನಾವೇನೂ ಆ ಭಾಗದ ಸಚಿವರಲ್ವಾ ಎಂದು ಉತ್ತರಿಸಿದ್ರು. ಪರಿಷತ್‍ನಲ್ಲೂ ಇದೇ ಪರಿಸ್ಥಿತಿ ಇತ್ತು. ಆದ್ರೆ, ಉತ್ತರ ಕರ್ನಾಟಕದ ಸಮಸ್ಯೆಗಳ ಇತ್ಯರ್ಥಕ್ಕಾಗಿಯೇ ಬೆಳಗಾವಿಯಲ್ಲಿ ಕನ್ನಡಸೌಧ ಕಟ್ಟಿದ್ರೂ ಪ್ರಯೋಜನ ಆಗುತ್ತಿಲ್ಲ. ಅಲ್ಲದೆ, ದಿನಕ್ಕೆ 3 ಕೋಟಿ ರೂ. ಖರ್ಚು ಮಾಡಿ ಕಲಾಪ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎನ್ನುವ ಟೀಕೆ ಕೇಳಿ ಬರುತ್ತಿದೆ.

ಹಾಜರಾದವರು ಯಾರು?
224 ಶಾಸಕರು ಇರುವ ವಿಧಾನಸಭೆಯಲ್ಲಿ ಬೆಳಗ್ಗೆ ಕಲಾಪಕ್ಕೆ ಹಾಜರಾದವರು 43 ಮಂದಿ ಮಾತ್ರ. 5 ಮಂದಿ ಸಚಿವರು ಉಪಸ್ಥಿತರಿದ್ದರೆ ಬಿಜೆಪಿಯ 15, ಕಾಂಗ್ರೆಸ್ ನ 23, ಜೆಡಿಎಸ್ 5 ಮಂದಿ ಹಾಜರಾಗಿದ್ದರು.

ಕಾಂಗ್ರೆಸ್ ಶಾಸಕರು:
ಶಿವರಾಮ್ ಹೆಬ್ಬಾರ್, ಶಿವಾನಂದಪಾಟೀಲ್, ಮುನಿರತ್ನ, ಪುಟ್ಟರಂಗಶೆಟ್ಟಿ, ನರೇಂದ್ರ, ಬೈರತಿ ಬಸವರಾಜು, ಜಿ.ಟಿ.ಪಾಟೀಲ್, ನರೇಂದ್ರಸ್ವಾಮಿ, ಸಿದ್ದು ನ್ಯಾಮಗೌಡ, ಗೋಪಾಲ್ ಪೂಜಾರಿ, ರಫೀಕ್, ಮಂಜುನಾಥ್, ಕೆ.ವೆಂಕಟೇಶ್, ವಡ್ನಾಳ್ ರಾಜಣ್ಣ, ಕೆ.ಎನ್.ರಾಜಣ್ಣ, ಷಡಕ್ಷರಿ, ಶ್ರೀನಿವಾಸ್, ಮಾಲೀಕಯ್ಯ ಗುತ್ತೇದಾರ್, ಉಮೇಶ್ ಜಾಧವ್, ಕಿಮ್ಮನೆ ರತ್ನಾಕರ್, ವಿಜಯಾನಂದ ಕಾಶಪ್ಪನವರ್, ಸತೀಶ್ ಸೈಲ್, ಮಂಕಾಳ ಸುಬ್ಬ ವೈದ್ಯ.

ಬಿಜೆಪಿ ಶಾಸಕರು:
ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಕೆ.ಜಿ.ಬೋಪಯ್ಯ, ಕಾಗೇರಿ, ಅಪ್ಪಚ್ಚು ರಂಜನ್, ಸುರೇಶ್ ಕುಮಾರ್, ಸಿ.ಟಿ.ರವಿ, ಬಾಲಚಂದ್ರ ಜಾರಕಿಹೊಳಿ, ಜೀವರಾಜ್, ಬಣಕಾರ್, ವಿಜಯ್ ಕುಮಾರ್, ಗುರು ಪಾಟೀಲ್ ಶಿರವಾಳ, ರಾಮಕ್ಕ, ಶಶಿಕಲಾ ಜೊಲ್ಲೆ, ಬಿ.ವೈ, ರಾಘವೇಂದ್ರ.

ಜೆಡಿಎಸ್ ಶಾಸಕರು:
ಹೆಚ್.ಡಿ.ರೇವಣ್ಣ, ವೈಎಸ್‍ವಿ. ದತ್ತಾ, ಪಿಳ್ಳ ಮುನಿಸ್ವಾಮಪ್ಪ, ಕೋನರೆಡ್ಡಿ, ಶಿವಲಿಂಗೇಗೌಡ.

ಐವರು ಸಚಿವರು
ಕಾಗೋಡು ತಿಮ್ಮಪ್ಪ, ಎಂ.ಬಿ.ಪಾಟೀಲ್, ಸಂತೋಷ್ ಲಾಡ್, ಕೃಷ್ಣಬೈರೇಗೌಡ, ಗೀತಾ ಮಹೇವಪ್ರಸಾದ್.

ಬೆಳಗಾವಿಯಲ್ಲಿ ನಡೆಯುತ್ತಿರುವ 10 ದಿನಗಳ ಅಧಿವೇಶನಕ್ಕೆ 28-30 ಕೋಟಿ ರೂ. ವೆಚ್ಚವಾಗುತ್ತಿದ್ದು, ದಿನಕ್ಕೆ 2-3 ಕೋಟಿ ರೂ. ಖರ್ಚಾಗುತ್ತದೆ. ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 2,500 ಸಾರಿಗೆ ಭತ್ಯೆ ನೀಡಿದರೆ, ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 5,000 ರೂ. ಪ್ರತಿನಿತ್ಯ ಸಾರಿಗೆ ಭತ್ಯೆಯಾಗಿ ನೀಡಲಾಗುತ್ತದೆ.

 

Advertisement
Advertisement