ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಜನಪರ ಹಾಗೂ ಸಂವಿಧಾನಬದ್ಧವಾದ ಕಾಯ್ದೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Advertisement
ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶೇಷವಾಗಿ ಎಸ್‍ಸಿ, ಎಸ್‍ಟಿ, ಬಡವರ ಪರವಾದ ಕಾಯ್ದೆಯಾಗಿದೆ. ಬರುವ ದಿನಗಳಲ್ಲಿ ಎಲ್ಲಾ ಜನಾಂಗಗಳ ರಕ್ಷಣೆ ಜೊತೆ ಅವರ ಸ್ವಾಭಿಮಾನವನ್ನು ಎತ್ತಿಹಿಡಿಯಲು ನೆರವಾಗುತ್ತದೆ. ಈ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಸರ್ಕಾರದ ಸ್ಪಷ್ಟ ನೀತಿಯಿದೆ. ಬಡತನ, ನಿರುದ್ಯೋಗ, ಶಿಕ್ಷಣದ ಕೊರತೆಯಿರುವ ಜನರಿಗೆ ಆಸೆ ಆಮಿಷಗಳನ್ನು ಒಡ್ಡುವ ಮೂಲಕ ಮತಾಂತರಕ್ಕೆ ಒತ್ತಾಯ ಮಾಡುತ್ತಿರುವುದಕ್ಕೆ ಸರ್ಕಾರದ ವಿರೋಧವಿದೆ ಎಂದು ತಿಳಿಸಿದರು.
Advertisement
Advertisement
ಕಾಂಗ್ರೆಸ್‍ನ ದ್ವಿಮುಖ ನೀತಿ:
ಇಂದು ಮತಾಂತರ ನಿಷೇಧ ಕಾಯ್ದೆ ವಿಧಾನಮಂಡಲದಲ್ಲಿ ಸರ್ವಾನುಮತದಿಂದ ಪಾಸ್ ಮಾಡಲಾಗಿದೆ. ಇಂದಿನ ದಿನವನ್ನು ಕಾಯ್ದೆಯ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಲಾಗಿತ್ತು. ವಿರೋಧ ಪಕ್ಷದವರು ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಮಾತನಾಡದೇ ಕೇವಲ ರಾಜಕೀಯ ಭಾಷಣ ಮಾಡಿದ್ದಾರೆ. ಕಾಂಗ್ರೆಸ್ ಅವರ ಕಾಲದಲ್ಲಿಯೇ ಈ ಕಾಯ್ದೆಯ ರಚನೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕಾನೂನು ಸಚಿವರ ಪರಿಶೀಲನೆಯ ನಂತರ ಸಚಿವ ಸಂಪುಟದಲ್ಲಿ ಕಾಯ್ದೆಯನ್ನು ಮಂಡಿಸಲು ಸ್ವತ: ಸಿದ್ದರಾಮಯ್ಯನವರೇ ಒಪ್ಪಿಗೆ ನೀಡಿದ್ದರು. ಸಚಿವ ಸಂಪುಟದಲ್ಲಿ ಮಂಡಿಸಲು ಒಪ್ಪಿಗೆ ನೀಡುವುದೆಂದರೆ ಕಾಯ್ದೆಯನ್ನು ಒಪ್ಪಿದಂತೆಯೇ ಅಲ್ಲವೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ನಂತರ ವಿಧಾನಮಂಡಲದಲ್ಲಿ ಅದೇ ಕಾಯ್ದೆಗೆ ಅವರು ವಿರೋಧ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ನ ದ್ವಿಮುಖ ನೀತಿಯನ್ನು ತೋರುತ್ತದೆ ಎಂದು ತಿಳಿಸಿದರು.
Advertisement
ಕಾಂಗ್ರೆಸ್‍ನ ವೋಟ್ ಬ್ಯಾಂಕ್ ರಾಜಕಾರಣ:
ಯಡಿಯೂರಪ್ಪನವರು ಈ ಕಾಯ್ದೆಯ ಕರಡನ್ನು ಸಿದ್ಧಪಡಿಸಿದ್ದಲ್ಲ. ಮನವಿಯನ್ನು ಅವರು ನೀಡಿದ್ದರೂ ಕಾನೂನು ಆಯೋಗಕ್ಕೆ ಕಳಿಸಿದರು. 2014 ರಲ್ಲಿ ಆಯೋಗದಿಂದ ವರದಿ ಬಂದ ನಂತರ ನಂತರ ಕಾಂಗ್ರೆಸ್ ನವರು ಕರಡನ್ನು ಸಿದ್ಧಪಡಿಸಿದ್ದರು. ಆಯೋಗದ ವರದಿಯನ್ನು ನಿರಾಕರಿಸಿ ಕಾಯ್ದೆಯನ್ನು ವಿರೋಧಿಸಲು ಕಾಂಗ್ರೆಸ್ ಬಳಿ ಮೂರು ವರ್ಷದ ಅವಧಿಯಿತ್ತು. ವರದಿಯನ್ನು ಅನುಮೋದಿಸಿ ಕರಡು ಕಾಯ್ದೆಯನ್ನೂ ಸಿದ್ಧಪಡಿಸಿ ಸಚಿವ ಸಂಪುಟದಲ್ಲಿ ಮಂಡಿಸುವವರೆಗಿನ ಎಲ್ಲ ಪ್ರಕ್ರಿಯೆಗಳನ್ನೂ ಕೈಗೊಂಡಿದ್ದರು. ಆಗ ಕಾಯ್ದೆಯನ್ನು ಬೆಂಬಲಿಸಿದ್ದ ಕಾಂಗ್ರೆಸ್ ನವರು ಈಗ ಕೇವಲ ವೋಟ್ ಬ್ಯಾಂಕ್ ಹಾಗೂ ರಾಜಕಾರಣಕ್ಕಾಗಿ ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಎಸ್‍ಸಿ, ಎಸ್‍ಟಿ ವಿರೋಧಿ ನಿಲುವು:
ಕಾಂಗ್ರೆಸ್ ಪಕ್ಷದವರು ಮತಾಂತರ ನಿಷೇಧ ಕಾಯ್ದೆಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜನತೆ ಅವರ ತಂತ್ರಗಳನ್ನು ಗಮನಿಸುತ್ತಿದ್ದಾರೆ. ಎಸ್‍ಸಿ, ಎಸ್‍ಟಿ ವಿರೋಧಿ ನಿಲುವನ್ನು ಕಾಂಗ್ರೆಸ್ ಇಂದು ಸದನದಲ್ಲಿ ಪ್ರದರ್ಶಿಸಿದೆ. ಈ ಸಮುದಾಯಕ್ಕೆ ಹೆಚ್ಚಿನ ರಕ್ಷಣೆ ಕೊಡುವ ಕೆಲಸವನ್ನು ಕಾಂಗ್ರೆಸ್ ಈ ಮೂಲಕ ವಿರೋಧಿಸುತ್ತಿದೆ. ಆರ್ಟಿಕಲ್ 46 ನಲ್ಲಿ ಕಾನೂನನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವುದಾಗಿ ಸಂವಿಧಾನದಲ್ಲಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಬಹುಮತದ ಕೊರತೆಯಿರುವುದರಿಂದ ವಿಧಾನಪರಿಷತ್ತಿನಲ್ಲಿ ಮತಾಂತರ ನಿಷೇದ ಕಾಯ್ದೆ ಪಾಸ್ ಆಗುವ ವಿಶ್ವಾಸವಿದೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿ ಇಂದಿನ ಬೆಳವಣಿಗೆಗಳಿಂದ ಪರಿಷತ್ತಿನ ಸದಸ್ಯರ ಭಾವನೆಗಳು ಬದಲಾಗಿ ಮಸೂದೆಗೆ ಅಂಗೀಕಾರ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಓಮಿಕ್ರಾನ್ ತಡೆಗೆ ಸಕಲ ಸಿದ್ಧತೆ:
ಒಮಿಕ್ರಾನ್ ತಡೆಗೆ ಈಗಾಗಲೇ ಸಭೆ ನಡೆಸಲಾಗಿದ್ದು, ಕೇಂದ್ರ ಹಾಗೂ ರಾಜ್ಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಓಮಿಕ್ರಾನ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಆಸ್ಪತ್ರೆ, ಬೆಡ್, ಆಕ್ಸಿಜನ್ ಹಾಗೂ ಮೂಲಸೌಕರ್ಯಗಳ ಪೂರೈಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.