ಬೆಳಗಾವಿ: ಬೆಳಗಾವಿಯ (Belagavi) ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ರುದ್ರೇಶ್ (SDA Rudresh) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಧೇಯ ಪತ್ರವೊಂದು ಅಧಿಕಾರಿಗಳ ಕಚೇರಿಗೆ ಬಂದಿದ್ದು ಬಿರುಗಾಳಿ ಸೃಷ್ಟಿಸಿದೆ.
ಜಿಲ್ಲೆಯ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ ಪ್ರಕರಣದ ಆರೋಪಿಗಳಾಗಿರುವ ಎ1 ತಹಶೀಲ್ದಾರ್ ಬಸವರಾಜ ನಾಗರಾಳ, ಎ2 ಅಶೋಕ ಕಬ್ಬಲಿಗೇರ್, ಎ3 ಹೆಬ್ಬಾಳ್ಕರ್ ಪಿಎ ಸೋಮುಗೆ ಜಾಮೀನು ಸಿಕ್ಕಿತ್ತು. ಜಾಮೀನು ಸಿಕ್ಕ ಬೆನ್ನಲ್ಲೇ ಅನಾಮಧೇಯ ಪತ್ರವೊಂದು ಅಧಿಕಾರಿಗಳ ಕಚೇರಿ ತಲುಪಿದೆ.
ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ ಸೇರಿದಂತೆ ಪ್ರಕರಣದ ತನಿಖಾಧಿಕಾರಿಗಳಿಗೆ ಪೋಸ್ಟ್ ಮೂಲಕ ಅನಾಮಧೇಯ ಪತ್ರ ತಲುಪಿದೆ.ಇದನ್ನೂ ಓದಿ: ದನ ಮೇಯಿಸಲು ಹೋಗಿ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕರು – ಓರ್ವನ ಶವ ಪತ್ತೆ
ಪತ್ರದಲ್ಲೇನಿದೆ?
ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಇದು ಕೊಲೆ. ತಹಶೀಲ್ದಾರ್ ಆಪ್ತ ಡ್ರೈವರ್ ಯಲ್ಲಪ್ಪ ಬಡಸದ ಈ ಕೊಲೆಯ ಸೂತ್ರಧಾರ. ತಹಶೀಲ್ದಾರ್ ಜೀಪ್ ಚೆಕ್ ಮಾಡಿದರೆ ಎಲ್ಲಾ ಸತ್ಯ ಹೊರಬರುತ್ತದೆ. ಅದು ಸೂಸೈಡ್ ಎಂದು ಹೇಳುತ್ತಿದ್ದಾರೆ ಆದರೆ ಅದು ಸೂಸೈಡ್ ಅಲ್ಲ. ಯಲ್ಲಪ್ಪನ ಹೆಂಡತಿ ಅನೈತಿಕ ಸಂಬಂಧ ಇಟ್ಟುಕೊಂಡು ಅವನ ಎಲ್ಲ ದುಡ್ಡು ಹೊಡೆದಿರುತ್ತಾಳೆ. ಡ್ರೈವರ್ ಯಲ್ಲಪ್ಪನನ್ನು ವಿಚಾರಣೆ ಮಾಡಿದರೆ ಕೊಲೆ ರಹಸ್ಯ ಹೊರಗೆ ಬರುತ್ತದೆ. ಸತ್ತವನಿಗೆ ನ್ಯಾಯ ಸಿಗಬೇಕು ಕೇಸ್ ಮುಚ್ಚಿ ಹಾಕಬಾರದು ಎಂದು ಉಲ್ಲೇಖಿಸಲಾಗಿದೆ.
ಅನಾಮಧೇಯ ಪತ್ರದಲ್ಲಿನ ಅಂಶಗಳನ್ನು ಕಂಡು ಖಾಕಿಯೇ ಶಾಕ್ ಆಗಿದ್ದು, ಪತ್ರದಲ್ಲಿನ ಎಲ್ಲ ಅಂಶಗಳ ಕುರಿತು ಖಡೇಬಜಾರ್ ಪೊಲೀಸರು ತನಿಖೆ ನಡೆಸುತ್ತಾರಾ? ಮುಂದೆ ಈ ಪ್ರಕರಣ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ
ಏನಿದು ಪ್ರಕರಣ?
ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ (ದ್ವಿತೀಯ ದರ್ಜೆ ಸಹಾಯಕ) ರುದ್ರೇಶ್ (ರುದ್ರಣ್ಣ) ಯಡಣ್ಣನವರ್ ನವೆಂಬರ್ 5 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಅವರು, ತನ್ನ ಸಾವಿಗೆ ಇವರೇ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು, ತಹಶಿಲ್ದಾರ್ ಬಸವರಾಜ ನಾಗರಾಳ, ಸಹೊದ್ಯೋಗಿ ಅಶೋಕ ಕಬ್ಬಲಿಗೇರ್ ಹೆಸರು ಉಲ್ಲೇಖಿಸಿ ವಾಟ್ಸಪ್ ಗ್ರೂಪಿನಲ್ಲಿ ಸಂದೇಶ ಕಳುಹಿಸಿದ್ದರು.ಇದನ್ನೂ ಓದಿ: ಕೌಟುಂಬಿಕ ಜಗಳ- ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದು ಕೊಲೆಗೈದ ಮೈದುನ