– ಚಾಲಕನ ಚಾಣಾಕ್ಷತನದಿಂದ ತಪ್ಪಿದ ಭಾರೀ ಅನಾಹುತ
ಚಿಕ್ಕೋಡಿ: ಕ್ಯಾಂಟರ್ ಹಿಂಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದರೂ ಚಾಲಕ ನೀರು ಇರುವ ಜಾಗದವರೆಗೂ ಚಾಲನೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ತಮಿಳುನಾಡಿನ ಚೆನ್ನೈಗೆ ಜನರೇಟರ್ ಗಳನ್ನು ಕ್ಯಾಂಟರ್ ನಲ್ಲಿ ಸಾಗಿಸಲಾಗುತ್ತಿತ್ತು. ಆದರೆ ಸಂಕೇಶ್ವರ ಪಟ್ಟಣದ ಸಮೀಪದಲ್ಲಿ ಲಾರಿಯ ಹಿಂಬದಿಯಲ್ಲಿದ್ದ ಜನರೇಟರ್ ಗೆ ಆಕಸ್ಮಿಕ ಬೆಂಕಿ ತಗುಲಿ, ಹೊತ್ತಿ ಉರಿಯುತ್ತಿತ್ತು. ಇದನ್ನು ನೋಡಿದ ಸಾರ್ವಜನಿಕರು, ಸವಾರರು ಸಂಕೇಶ್ವರ ಪಟ್ಟಣದಲ್ಲಿ ಚಾಲಕನ ಗಮನಕ್ಕೆ ತಂದಿದ್ದಾರೆ.
Advertisement
Advertisement
ಈ ವಿಚಾರ ಗೊತ್ತಾಗುತ್ತಿದ್ದಂತೆ ಚಾಲಕ ಸಂಜು ಮಾದಿಗಾರ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸುವ ವೇಳೆಗೆ ಲಾರಿ ಕೂಡ ಸುಟ್ಟು ಭಸ್ಮವಾಗುತ್ತದೆ ಎಂದು ಯೋಜಿಸಿದ್ದ. ಹೀಗಾಗಿ ತಕ್ಷಣವೇ ಚಾಣಾಕ್ಷತನ ಮೆರೆದು ವಾಟರ್ ಸರ್ವಿಸ್ ಮಾಡುವ ಗ್ಯಾರೆಜ್‍ವರೆಗೂ ಅಂದ್ರೆ ಹೆಬ್ಬಾಳ ಗ್ರಾಮದ ಸಮೀಪ 5 ಕಿ.ಮೀ ವರೆಗೆ ಜನರೇಟರ್ ಗೆ ಬೆಂಕಿ ಹತ್ತಿದ್ದರೂ ಕ್ಯಾಂಟರ್ ಚಾಲನೆ ಮಾಡಿಕೊಂಡು ಬಂದಿದ್ದಾನೆ.
Advertisement
ವಾಟರ್ ಸರ್ವಿಸ್ ಗ್ಯಾರೆಜ್‍ಗೆ ಕ್ಯಾಂಟರ್ ಬಂದು ನಿಲ್ಲುತ್ತಿದ್ದಂತೆ ಚಾಲಕನ ಅಲ್ಲಿದ್ದ ಜನರೊಂದಿಗೆ ಸೇರಿ ನೀರು ಸುರಿದು ಬೆಂಕಿಯನ್ನ ನಂದಿಸಿದ್ದಾನೆ. ಘಟನೆಯಲ್ಲಿ ಜನರೇಟರ್ ಸಂಪೂರ್ಣ ಸುಟ್ಟು ಭಸ್ಮವಾದರೂ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.