ಬೆಳಗಾವಿ| ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಸಾವು – ಬಿಮ್ಸ್‌ ಮುಂದೆ ಸಂಬಂಧಿಕರ ಪ್ರತಿಭಟನೆ

Public TV
2 Min Read
Belagavi BIMS hospital

ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದ್ದು, ರೊಚ್ಚಿಗೆದ್ದ ಕುಟುಂಬಸ್ಥರು ಬೆಳಗಾವಿ ಬಿಮ್ಸ್ ಆಸ್ಪತ್ರೆ (Belagavi BIMS Hospital) ಎದುರು ದಿಢೀರ್ ಪ್ರತಿಭಟನೆ (Protest) ನಡೆಸಿ, ತಪ್ಪಿತಸ್ಥ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಮದುರ್ಗ ತಾಲೂಕಿನ ನಾಗನೂರ ತಾಂಡಾದ ಬಾಣಂತಿ ಕಲ್ಪನಾ ಅನಿಲ ಲಮಾಣಿ (26) ಮೃತ ಮಹಿಳೆ. ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಮುಂದೆ ಬಾಣಂತಿ ಕುಟುಂಬಸ್ಥರು ಮತ್ತು ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟಿಸಿದರು.

ಮಂಗಳವಾರ ನಸುಕಿನ 2:30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗುವಿಗೆ ಕಲ್ಪನಾ ಜನ್ಮ ನೀಡಿದ್ದರು. ಈ ವೇಳೆ ಮಗು ಮತ್ತು ತಾಯಿ ಆರೋಗ್ಯ ಇರುವುದಾಗಿ ವೈದ್ಯರು ಹೇಳಿದ್ದರಂತೆ. ಬೆಳಗ್ಗೆ 8:30ರವರೆಗೂ ಆರೋಗ್ಯವಾಗಿದ್ದ ಕಲ್ಪನಾ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿ ಸಾವುನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವಾಗಿದೆ. ಎರಡು ಬಾರಿ ಸಿಸೇರಿಯನ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ತಾಯಿ ಮೃತರಾಗಿದ್ದರೆ, ಹಸಗೂಸು ಆಸ್ಪತ್ರೆಯ ಐಸಿಯು ಘಟಕದಲ್ಲಿದೆ.

 

ಆಪರೇಷನ್ ಸಂದರ್ಭದಲ್ಲಿ ಧರಿಸುವ ವಸ್ತ್ರ ಧರಿಸಿಲ್ಲ, ತರಾತುರಿಯಲ್ಲಿ ಸಿಸೇರಿಯನ್‌ ಮಾಡಿದ್ದಾರೆ. ಆರೋಗ್ಯದಲ್ಲಿ ಏರುಪೇರು ಆದಾಗ ಬೇರೆಡೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಕುಟುಂಬಸ್ಥರು ಮನವಿ ಮಾಡಿದರೂ, ಬೇರೆ ಆಸ್ಪತ್ರೆಗೆ ಕಳುಹಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ನಿರ್ಲಕ್ಷ್ಯ ತೋರಿದ ವೈದ್ಯರನ್ನು ಈ ಕೂಡಲೇ ವಜಾ ಮಾಡುವಂತೆ ಕಲ್ಪನಾ ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ಇದನ್ನೂ ಓದಿ: MUDA Scam| ನೋಟಿಸ್‌ ಇಲ್ಲದೇ ರಾತ್ರಿ ದಿಢೀರ್‌ ಲೋಕಾ ಎಸ್‌ಪಿ ಕಚೇರಿಗೆ ಭೇಟಿ ನೀಡಿದ ಸಿಎಂ ಬಾಮೈದ!

ಹೆರಿಗೆ ಶಾಸ್ತ್ರ ಮತ್ತು ಶಿಶುವೈದ್ಯಶಾಸ್ತ್ರ ವಿಭಾಗಕ್ಕೆ ಬಿಮ್ಸ್ ನಿರ್ದೇಶಕ ಡಾ. ಅಶೋಕ ಶೆಟ್ಟಿ ಆಗಮಿಸುತ್ತಿದ್ದಂತೆ ಆಸ್ಪತ್ರೆ ಬಾಗಿಲಿನಲ್ಲಿಯೇ ಅವರನ್ನು ಕಲ್ಪನಾ ಕುಟುಂಬಸ್ಥರು ಘೇರಾವ್ ಹಾಕಿದರು. ಮಗಳ ಸಾವಿಗೆ ನ್ಯಾಯ ಸಿಗಬೇಕು, ನಮಗೆ ಆದಂತಹ ಪರಿಸ್ಥಿತಿ ಯಾರಿಗೂ ಆಗಬಾರದು. ಈ ಕೂಡಲೇ ನಿರ್ಲಕ್ಷ್ಯ ತೋರಿದ ವೈದ್ಯರ ವಜಾ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ. ಅಶೋಕ ಶೆಟ್ಟಿ ಮೂವರು ಜನರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ಮಾಡಿಸುತ್ತೇನೆ. ತಪ್ಪಿತಸ್ಥ ವೈದ್ಯರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಯಾವುದೇ ಅಹಿತಕರ ಘಟನೆ ಆಗದಂತೆ ಆಸ್ಪತ್ರೆ ಮುಂಭಾಗದಲ್ಲಿ ಪೊಲೀಸ್ ಸಿಬ್ಬಂದಿಗಳ ನಿಯೋಜಿಸಲಾಗಿದೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

 

Share This Article