-ಹೊಸ ತಿರುವು ಪಡೆದ ಜಾರಕಿಹೊಳಿ ಬ್ರದರ್ಸ್ ಫೈಟ್!
ಬೆಳಗಾವಿ: ಕಳೆದ ಮೂವತ್ತು ವರ್ಷದಿಂದ ಅಣ್ಣ ತಮ್ಮಂದಿರೆಲ್ಲರೂ ಸೇರಿಕೊಂಡು ಕಟ್ಟಿದ್ದ ಕೋಟೆಯದು. ಜನರ ಒಳಿತಿಗಾಗಿ ಸಮಾಜದ ಸೇವೆಗಾಗಿ ಕಟ್ಟಿದ ಸಾಮ್ರಾಜ್ಯ ಆರಂಭದಲ್ಲಿ ಒಳೆಯ ಕೆಲಸ ಮಾಡಿತು. ಆದರೆ ಅಣ್ಣ-ತಮ್ಮಂದಿರ ರಾಜಕೀಯ ಕಿತ್ತಾಟದಿಂದ ಇಂದು ಆ ಕೋಟೆಯನ್ನ ಕಟ್ಟಿ ಬೆಳೆಸಿದ ಸಹೋದರನೇ ಕೆಡವಲು ಹೊರಟಿದ್ದಾರೆ.
ಗೋಕಾಕ್ ಅಂದ್ರೆ ಜಾರಕಿಹೊಳಿ, ಜಾರಕಿಹೊಳಿ ಅಂದ್ರೆ ಗೋಕಾಕ್ ಅನ್ನುವಷ್ಟರ ಮಟ್ಟಿಗೆ ರಾಜ್ಯದಲ್ಲಿ ಪ್ರಸಿದ್ಧಿಯಾಗಿತ್ತು. ಈ ಜಾರಕಿಹೊಳಿ ಸಾಮ್ರಾಜ್ಯ, ಅಣ್ಣ-ತಮ್ಮಂದಿರು ಒಂದಾಗಿದ್ದರೆ ಏನೆಲ್ಲಾ ಮಾಡಬಹುದು ಅನ್ನೋದಕ್ಕೆ ಉದಾಹರಣೆ ಆಗಿತ್ತು. ಆದರೆ ಎಷ್ಟೇ ಆದರೂ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನುವ ಗಾದೆ ಎಂದಿಗೂ ಸುಳ್ಳಾಗಲ್ಲ ಎಂಬುದು ಮತ್ತೊಮ್ಮೆ ನಿಜ ಆಗಿದೆ.
Advertisement
Advertisement
ಗೋಕಾಕ್ ಸಾಹುಕಾರರಾದ ಜಾರಕಿಹೊಳಿ ಬ್ರದರ್ಸ್ ನಡುವೆ ಸದ್ಯ ರಾಜಕೀಯ ಪೈಟ್ ಆರಂಭವಾಗಿದೆ. ಒಂದು ಕಡೆ ಅನರ್ಹ ಶಾಸಕ ರಮೇಶ್ ಮತ್ತು ಬಿಜೆಪಿ ಶಾಸಕ ಬಾಲಚಂದ್ರ ಇದ್ದರೆ ಇನ್ನೊಂದು ಕಡೆ ಮಾಜಿ ಸಚಿವ ಸತೀಶ್ ಮತ್ತು ಕಾಂಗ್ರೆಸ್ ಮುಖಂಡ ಲಖನ್ ಇದ್ದಾರೆ. ಈ ಅಣ್ಣ-ತಮ್ಮಂದಿರ ಜಗಳದಿಂದ ಮೂವತ್ತು ವರ್ಷದ ಹಿಂದೆ ಕಟ್ಟಿಕೊಂಡಿದ್ದ ಜಾರಕಿಹೊಳಿ ಸಾಮ್ರಾಜ್ಯವನ್ನ ಕಟ್ಟಿ ಬೆಳೆಸಿದ್ದ ಸತೀಶ್ ಕೆಡವಲು ಮುಂದಾಗಿದ್ದಾರೆ. ಕಳೆದ ಐದು ಬಾರಿ ಗೋಕಾಕ್ ನಲ್ಲಿ ಶಾಸಕನಾಗಿ ಆಡಳಿತ ನಡೆಸಿರುವ ರಮೇಶ್ ಇತ್ತಿಚೀನ ದಿನಗಳಲ್ಲಿ ಯಾವುದೇ ಕೆಲಸ ಮಾಡದೇ ಬರೀ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ ಎನ್ನಲಾಗುತ್ತಿದ್ದು, ಖುದ್ದು ಸಹೋದರ ಸತೀಶ್ ಜಾರಕಿಹೊಳಿ ಅಣ್ಣನ ವಿರುದ್ಧ ಇಂತಹದ್ದೊಂದು ಆರೋಪ ಮಾಡಿದ್ದಾರೆ.
Advertisement
Advertisement
ಗೋಕಾಕ್ ನಲ್ಲಿ ಸದ್ಯ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನೂರಕ್ಕೂ ಅಧಿಕ ಕೇಸ್ ದಾಖಲಾಗಿದ್ದು, ಕಾರಣವಿಲ್ಲದೇ ಈ ರೀತಿ ಪೊಲೀಸರು ಕೇಸ್ ಮಾಡುತ್ತಿದ್ದಾರೆ ಎಂದು ಖದ್ದು ಸತೀಶ್ ಜಾರಕಿಹೊಳಿ ಎಸ್.ಪಿ ಲಕ್ಷ್ಮಣ್ ಅವರಿಗೆ ಪತ್ರ ಬರೆದಿದ್ದಾರೆ. ಇದರಿಂದ ಸದ್ಯ ಗೋಕಾಕ್ ನಲ್ಲಿ ಬೇರೊಂದು ರೀತಿಯಲ್ಲಿ ರಾಜಕೀಯ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಕಳೆದ ಒಂದು ವಾರದ ಹಿಂದಷ್ಟೇ ರಮೇಶ್ ಜಾರಕಿಹೊಳಿ ಸಾವಿರಾರು ಜನರನ್ನ ಸೇರಿಸಿ ಸಂಕಲ್ಪ ಸಮಾವೇಶ ಮಾಡಿ ವೋಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಕೆಲಸ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಸದ್ಯ ಸತೀಶ್ ಕೂಡ ಬೇರೊಂದು ರೀತಿಯ ಗೇಮ್ ಆಡುತ್ತಿದ್ದು, ತಮ್ಮತ್ತ ಗೋಕಾಕ್ ಜನರನ್ನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಬೆಳವಣಿಗೆ ನಡುವೆ ಕಳೆದ ನಾಲ್ಕು ದಿನಗಳ ಹಿಂದೆ ರಮೇಶ್ ಜಾರಕಿಹೊಳಿ ಗೋಕಾಕ್ ಅಧಿಕಾರಿಗಳ ಸಭೆ ಕರೆದು ಅಳಿಯ ಅಂಬಿರಾವ್ ಪಾಟೀಲ್ ಹೇಳಿದಂತೆ ಕೆಲಸ ಮಾಡಿ ಎಂದು ಸೂಚನೆ ಕೂಡ ನೀಡಿದ್ದಾರೆ ಎನ್ನಲಾಗಿದೆ.
ಇದು ಸತೀಶ್ ಗೆ ನಿದ್ದೆಗೆಡಸಿದ್ದು ಈ ಕಾರಣಕ್ಕೆ ಅಳಿಯ ಅಂಬಿರಾವ್ ವಿರುದ್ಧ ಶುಕ್ರವಾರ ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೆ ಅಂಬಿರಾವ್ ಗೆ ನಮ್ಮ ಬಗ್ಗೆ ಭಯವಿಲ್ಲ. ಗೋಕಾಕ್ ನಲ್ಲಿ ಜನರ ಮೇಲೆ ಗುಲಾಮಗಿರಿ ನಡೆಸುತ್ತಿದ್ದು, ಈ ಕಾರಣಕ್ಕೆ ಜನರಿಗೆ ಸ್ವಾತಂತ್ರ್ಯ ಕೊಡಿಸಲು ಹೋರಾಟ ಮಾಡುತ್ತಿದ್ದೇನೆ. ಗೋಕಾಕ್ ಜನರಿಗೆ ಅಂಬಿರಾವ್ ಪಾಟೀಲ್ ನಿಂದ ಸ್ವಾತಂತ್ರ್ಯಗೊಳ್ಳಬೇಕಿದೆ. ಅಷ್ಟೇ ಅಲ್ಲದೆ ಮೂವತ್ತು ವರ್ಷಗಳ ಹಿಂದೆ ಜಾರಕಿಹೊಳಿ ಕೋಟೆಯನ್ನ ಸಮಾಜ ಸೇವೆ ಮಾಡಲು ಕಟ್ಟಿದ್ದೆವು. ಈಗ ಜಾರಕಿಹೊಳಿ ಶಕ್ತಿ ಒಳ್ಳೆಯದಕ್ಕೆ ಬಳಕೆ ಆಗುತ್ತಿಲ್ಲ. ಈ ಕಾರಣಕ್ಕೆ ಅದನ್ನ ಕೆಡುವ ಚಿಂತನೆಗೆ ಬಂದಿದ್ದೇವೆ. ಹೀಗೆ ಜಾರಕಿಹೊಳಿ ಕಟ್ಟಿ ಬೆಳೆಸಿದ ಸತೀಶ್ ಜಾರಕಿಹೊಳಿ ಸಹೋದರನ ವಿರುದ್ಧ ಫೈಟ್ ಗಿಳಿದಿದ್ದು ಅಷ್ಟೇ ಅಲ್ಲದೆ ತಾವೇ ಕಟ್ಟಿ ಬೆಳೆಸಿ ಕೋಟೆಯನ್ನ ಇಂದು ಕೆಡವಲು ಮುಂದಾಗಿದ್ದಾರೆ. ಇದು ಉಪಚುನಾವಣೆಯಲ್ಲಿ ಜಾರಕಿಹೊಳಿ ವಿರೋಧಿ ಬಣವನ್ನ ಸೆಳೆಯುವ ತಂತ್ರ ಕೂಡ ಅಂತಾ ಕೆಲವು ಬಿಂಬಿಸುತ್ತಿದ್ದಾರೆ.
ಒಟ್ಟಿನಲ್ಲಿ ಅಣ್ಣ-ತಮ್ಮಂದಿರ ಜಗಳ ಕಳೆದ ಆರು ತಿಂಗಳಿನಿಂದಲೂ ಆರಂಭವಾಗಿದ್ದು, ಈಗ ಬೇರೆ ರೀತಿಯ ತಿರುವು ಪಡೆದುಕೊಂಡಿದೆ ಈ ಬ್ರದರ್ಸ್ ಫೈಟ್ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ಹಾಗೆ ಇಬ್ಬರು ಅಣ್ತಮ್ಮಂದಿರ ನಡುವೆ ಸದ್ಯ ಗೋಕಾಕ್ ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ತಮ್ಮ ಕೆಲಸ ಮಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿ ಎನನ್ನೂ ಮಾಡದ ಸ್ಥಿತಿಯಲ್ಲಿದ್ದಾರೆ. ಇತ್ತ ಆಯಾ ಬೆಂಬಲಿಗರ ಮೇಲೆ ಕೇಸ್ ಕೂಡ ಆಗುತ್ತಿದ್ದು, ಈ ಎಲ್ಲ ಕಾರಣಕ್ಕೆ ಸದ್ಯ ಗೋಕಾಕ್ ನ ಜನರು ಸಿಕ್ಕು ನಲಗುವಂತಾಗಿದೆ.