ಬೆಳಗಾವಿ: ರಾಜ್ಯ ರಾಜಕೀಯ ಕಡಲ ನಗರಿ ಗೋವಾಗೆ ಶಿಫ್ಟ್ ಆಗುವ ಸಾಧ್ಯತೆಯಿದೆ. ಆಪರೇಶನ್ ಕಮಲಕ್ಕೆ ಸಿದ್ಧತೆ ನಡೆದಿದ್ದು ಅದಕ್ಕೆ ಗೋವಾ ಸಾಕ್ಷಿಯಾಗಲಿದೆಯಾ ಎಂಬ ಗುಮಾನಿ ಭಾರೀ ಸುದ್ದಿಯಾಗುತ್ತಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಗೋವಾದ ಹೋಟೆಲೊಂದರಲ್ಲಿ ಕೊಠಡಿಗಳು ಬುಕ್ ಆಗಿವೆ ಎಂದು ಹೇಳಲಾಗುತ್ತಿದೆ.
ಹೌದು. ಲೋಕಸಭಾ ಚುನಾವಣಾ ಫಲಿತಾಂಶ ಮೈತ್ರಿ ಸರ್ಕಾರದ ಪತನಕ್ಕೆ ನಾಂದಿ ಹಾಡಿದೆ. ಇದಕ್ಕೆ ಪುಷ್ಠಿ ಎಂಬಂತೆ ರಾಜ್ಯ ರಾಜಕೀಯದಲ್ಲಿ ಆಪರೇಶನ್ ಕಮಲ ಹಾಗೂ ರೆಸಾರ್ಟ್ ಪಾಲಿಟಿಕ್ಸ್ ಮತ್ತೆ ಶುರುವಾಗುತ್ತಿದೆ. ಈ ಬಾರಿ ಕೆಲ ರೆಬಲ್ ಶಾಸಕರೇ, ಖುದ್ದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಫೋನ್ ಮಾಡಿ, ದೇಶದಲ್ಲಿ ಬಿಜೆಪಿ ಹವಾ ಹುಬ್ಬೇರಿಸಿದೆ. ಈಗ ಆಪರೇಶನ್ ಕಮಲಕ್ಕೆ ಸರಿಯಾದ ಸಮಯ ಎನ್ನುತ್ತಿದ್ದಾರೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ರೆಬೆಲ್ ಶಾಸಕರ ರೆಬೆಲ್ ಕ್ಯಾಪ್ಟನ್ ರಮೇಶ್ ಜಾರಕಿಹೊಳಿ, ಆಪರೇಶನ್ ಕಮಲಕ್ಕಾಗಿ ದಿನಾಂಕ ನೀವು ನಿಗದಿಪಡಿಸಿ, ಅದುವರೆಗೆ ಶಾಸಕರು ನನ್ನ ಜೊತೆ ಇರ್ತಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಗೋವಾದಲ್ಲಿ ರೆಸಾರ್ಟ್ ಪಾಲಿಟಿಕ್ಸ್!:
ಕಳೆದ ಬಾರಿ ಆಪರೇಶನ್ ಕಮಲಕ್ಕೆ ಜಾಗ ಗುರುತಿಸಿದ್ದು ಮಾಯಾ ನಗರಿ ಮುಂಬೈ. ಆದರೆ ಶತಾಯಗತಾಯ ಪ್ರಯತ್ನ ಮಾಡಿ ಶಾಸಕರ ಬಲ ಹೆಚ್ಚಾಗದೆ ಮೈ ಪರಚಿಕೊಂಡು ಮನೆಗೆ ಬಂದ ರಮೇಶ್ ಅವರಿಗೆ ಯಾಕೋ ಮುಂಬೈ ನಗರದ ಮೇಲೆ ಮೊಹ ಕಡಿಮೆಯಾಗಿದೆಯಂತೆ. ಹೀಗಾಗಿ ಕಡಲನಗರಿ ಗೋವಾದಲ್ಲಿಯೇ ಆಪರೇಶನ್ ಆಟ ಶುರು ಮಾಡುತ್ತಿದ್ದಾರೆ. ಇದಕ್ಕಾಗಿ ಗೋವಾದ ಪ್ರಭಾವಿ ಸಚಿವರಿಗೆ ಉಸ್ತುವಾರಿ ನೀಡಲಾಗಿದೆ. ಗೋವಾದ ಫೋರ್ಟ್ ಅಗುಡಾದಲ್ಲಿರುವ ದುಬಾರಿ ಫೈಸ್ಟಾರ್ ರೆಸಾರ್ಟ್ ತಾಜ್ ಹಾಲಿಡೇ ವಿಲೇಜ್‍ನಲ್ಲಿ 30 ರೂಂಗಳನ್ನು ಬುಕ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಸಮುದ್ರ ತೀರದಲ್ಲಿರುವ ಈ ಹೋಟೆಲ್‍ನ ಎರಡೂ ಕಡೆ ಬೀಚ್ ಇದ್ದು ಒಂದು ಕಡೆ ಗುಡ್ಡವಿದೆಯಂತೆ. ಇದು ಭದ್ರತೆಗೆ ಸರಿಯಾದ ತಾಣ. ಯಾವುದೇ ಕ್ಷಣದಲ್ಲಿ ಗೆಸ್ಟ್ ಬರಬಹುದು ಅದಕ್ಕಾಗಿ ಸಿದ್ಧವಾಗಿರಿ ಎಂದು ಹೋಟೆಲ್ ಮ್ಯಾನೆಜ್‍ಮೆಂಟ್‍ಗೆ ಸೂಚನೆ ನೀಡಲಾಗಿದೆ. ಈಗಾಗಲೇ ಉಸ್ತುವಾರಿ ಸಚಿವರು ಎಲ್ಲಾ ಸಿದ್ಧತೆ ಪರಿಶೀಲಿಸಿಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದರಿಂದ ದೋಸ್ತಿ ಸರ್ಕಾರಕ್ಕೆ ಮತ್ತೆ ಆತಂಕ ಎದುರಾಗಿದೆ.