ಚಿಕ್ಕೋಡಿ(ಬೆಳಗಾವಿ): ಕಾರ್ಯಕ್ರಮಗಳಲ್ಲಿ ಗಣ್ಯರಿಗೆ ಒಂದು ಹೂವು ಕೊಟ್ಟರೆ ಸಾಕು. ಮೋಮೆಂಟೊ, ಶಾಲು ಬಳಸಿ ಸನ್ಮಾನಕ್ಕೆ ಖರ್ಚು ಮಾಡುವ ಬದಲು ಅದೇ ಹಣವನ್ನು ಬಡ ವಿದ್ಯಾರ್ಥಿಗಳಿಗೆ ಅಥವಾ ಇನ್ನಾವುದೋ ಸತ್ಕಾರ್ಯಗಳಿಗೆ ಬಳಸಿರಿ ಅದು ಉಪಯೋಗವಾಗುತ್ತದೆ ಎಂದು ಹಿರೇಮಠದ ವೀರೇಶ್ವರ ಸ್ವಾಮೀಜಿ ಹೇಳಿದರು.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಗೆಳೆಯರ ಬಳಗದ ವತಿಯಿಂದ ಹುತಾತ್ಮ ಯೋಧ ಶ್ರೀಕಾಂತ ಖೋಬ್ರಿ ಹಾಗೂ ಮೃತರಾದ ಪೇದೆ ಸುರೇಶ ಡೆಂಗಿ ಇವರ ಪುಣ್ಯಸ್ಮರಣೋತ್ಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು. ಗ್ರಾಮದ ಮೇಲೆ ಅಗಾಧವಾದ ಪ್ರೀತಿ ವಿಶ್ವಾಸ ಹೊಂದಿದ್ದ ಇಬ್ಬರು ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಬೇಕು ಅಂತಾದರೆ ಗ್ರಾಮದ ಯುವಕರು ಐಎಎಸ್, ಕೆಎಎಸ್ ಅಧಿಕಾರಿಯಾಗಲು ಶ್ರಮಪಡಬೇಕು ಎಂದರು.
ಸೋಲು ಯಾರಿಗೂ ಶಾಶ್ವತವಲ್ಲ. ಸೋತರೂ ಗೆದ್ದೇ ಗೆಲ್ಲುವೆ ಎಂಬ ಛಲದಿಂದ ಧೃತಿಗೆಡದೆ ಸಾಧನೆಯ ಶಿಖರವೇರಲು ಶ್ರಮಿಸುವರೋ ಅಂತವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ. ಹೀಗಾಗಿ ಯಶಸ್ವಿ ವ್ಯಕ್ತಿಯಾಗಲು ಆದರ್ಶ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ಮುನ್ನಡೆಯಿರಿ ಎಂದು ಹೇಳಿದರು. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿನಿಗೆ ಕೀ ಆನ್ಸರ್- 8 ಜನರು ಅರೆಸ್ಟ್
ಇದೇ ವೇಳೆ ಡಾ.ಬಿ.ಎಸ್.ಕಾಮನ್ ಮಾತನಾಡಿ, ಸಂಘಟನೆಯಲ್ಲಿ ಶಕ್ತಿ ಇದೆ ಅನ್ನೋದು ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಗೆಳೆಯರ ಬಳಗದ ಸಾಮಾಜಿಕ ಕಾರ್ಯ ನೋಡಿ ಕಲಿಯಬೇಕು. ನಿವೃತ್ತ ಸೈನಿಕರಾದ ಆನಂದ ಸನಗೊಂಡ, ಮಾಳು ಸವನೂರ, ಅನೀಲ ಹಡಪದ, ಪಿಂಟು ಮೋರೆ, ಮಹಾದೇವ ಸಕ್ರಿ ಇವರನ್ನು ಸತ್ಕರಿಸಲಾಯಿತು. ಗಂಗಪ್ಪ ಗಂಗಾಧರ, ಮಹಾದೇವ ಬಾಣಿ, ಸಿದ್ದಲಿಂಗ ಮಾದರ, ಬಸವರಾಜ ರೊಟ್ಟಿ, ಸಾಬು ಅರಟಾಳ, ಸಿದ್ದಪ್ಪ ಕೊಕಟನೂರ, ಹುಚ್ಚಪ್ಪ ದಾಶ್ಯಾಳ, ಶಸಿಕಾಂತ ಡೆಂಗಿ, ಪ್ರಶಾಂತ ಪಡಸಲಗಿ ಉಪಸ್ಥಿತರಿದ್ದರು.