ಬೆಳಗಾವಿ: ಮೋದಗಾ ಗ್ರಾಮದ ರಹವಾಸಿಯೆಂದು ಸುಳ್ಳು ರಹವಾಸಿ ಪ್ರಮಾಣಪತ್ರ ಪಡೆದು ಮೋದಗಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೋಳಿ ಕೂಡಲೇ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಭಾರತೀಯ ಕೃಷಿಕ ಸಮಾಜದ ಸಿದಗೌಡ ಮೋದಗಿ ಆಗ್ರಹಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾನಾಪೂರ ತಾಲೂಕಿನ ಚಿಕ್ಕಹಟ್ಟಿಹೋಳಿ ಗ್ರಾಮದವರಾಗಿರುವ ಚನ್ನರಾಜ ಹಟ್ಟಿಹೋಳಿ ತಾವು ಮೋದಗಾ ಗ್ರಾಮದ ರಹವಾಸಿಯೆಂದು ಸುಳ್ಳು ಪ್ರಮಾಣಪತ್ರ ಪಡೆದಿದ್ದಾರೆ ಎಂದರು.
Advertisement
ರಹವಾಸಿ ಪ್ರಮಾಣಪತ್ರ ನೀಡುವುದು ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಆದರೆ, ಚನ್ನರಾಜ ಹಟ್ಟಿಹೋಳಿ ಮೋದಗಾ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಲ್ಲಿಸಿರುವ ರಹವಾಸಿ ಪ್ರಮಾಣಪತ್ರದ ಮೇಲೆ ಮೋದಗಾ ಗ್ರಾಪಂ ಸದಸ್ಯ ಬಾಬು ಕಾಳೆ ಎಂಬವರು ಸಹಿ ಮಾಡಿದ್ದಾರೆ. ಸುಳ್ಳು ರಹವಾಸಿ ಪ್ರಮಾಣಪತ್ರ ಪಡೆದಿರುವ ಚನ್ನರಾಜ ಹಟ್ಟಿಹೋಳಿ, ರಹವಾಸಿ ಪ್ರಮಾಣಪತ್ರದ ಮೇಲೆ ಸಹಿ ಮಾಡಿರುವ ಗ್ರಾ.ಪಂ ಸದಸ್ಯ ಬಾಬು ಕಾಳೆ, ರಹವಾಸಿ ಪ್ರಮಾಣಪತ್ರ ಪರಿಶೀಲಿಸದೆ ಸಂಘದ ಸದಸ್ಯತ್ವ ನೀಡಿರುವ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮಹಾನಗರ ಪೋಲಿಸ್ ಆಯುಕ್ತರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.
Advertisement
ಚನ್ನರಾಜ ಹಟ್ಟಿಹೋಳಿ ಸುಳ್ಳು ರಹವಾಸಿ ಪ್ರಮಾಣಪತ್ರ ಸಲ್ಲಿಸಿ, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿ 2019 ರಲ್ಲಿ ನಡೆದ ಸಂಘದ ಚುನಾವಣೆಯಲ್ಲಿ ಮೋದಗಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಯುವ ಉದ್ಯಮಿಗಳಾಗಿರುವ ಚನ್ನರಾಜ ಹಟ್ಟಿಹೋಳಿ ಪ್ರಾರಂಭದಲ್ಲಿಯೇ ಕಳ್ಳ ಮಾರ್ಗ ಅನುಸರಿಸಿರುವುದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ನಕಲಿ ದಾಖಲೆಗಳು ಪಡೆಯುವುದು ಮತ್ತು ಕೊಡುವುದು ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧ. ಇಲ್ಲಿ ಕಾನೂನು ಮತ್ತು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ತಪ್ಪಿತಸ್ಥರ ವಿರುದ್ಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಚನ್ನರಾಜ ಹಟ್ಟಿಹೋಳಿ ಗೌರವಯುತವಾಗಿ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ಗಮಿಸಬೇಕು ಎಂದು ಆಗ್ರಹಿಸಿದರು.
Advertisement
ಚನ್ನರಾಜ ಹಟ್ಟಿಹೋಳಿ ಸಹಕಾರ ಕ್ಷೇತ್ರದ ದಿಗ್ಗಜರಾಗುವ ಮತ್ತು ರಾಜಕೀಯವಾಗಿ ಬೆಳೆಯಲು ಅನುಸರಿಸಿರುವ ಮಾರ್ಗ ಸರಿ ಅಲ್ಲ. ಸಹಕಾರ ಕ್ಷೇತ್ರವು ಅಕ್ರಮಗಳಿಂದ ಮುಕ್ತವಾಗಿರಬೇಕು ಎಂಬುದೇ ತಮ್ಮ ಉದ್ದೇಶ ಎಂದರು. ಇದೇ ವೇಳೆ ಸುರೇಶ್ ಮರಲಿಂಗಣ್ಣವರ, ಅಡಿವೆಪ್ಪ ಕುಂದರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.